ಪ್ರಜ್ವಲ್ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು : ಮೇ.05:- ಹಾಸನ ಜಿಲ್ಲೆಯ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್.ಡಿ.ರೇವಣ್ಣ ಅವರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಿ, ಶಿಕ್ಷೆಗೆ ಒಳಪಡಿಸಿಬೇಕು. ಸಂತ್ರಸ್ತ ಮಹಿಳೆಯರನ್ನು ರಕ್ಷಣೆ ಮಾಡಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಶನಿವಾರ ಪ್ರತಿಭಟನೆ ನಡೆಯಿತು.
ನಗರದ ಚಿಕ್ಕಗಡಿಯಾರದ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ಆರೋಪಿಗಳ ವಿರುದ್ಧ ಘೋಷಣೆ ಕೂಗಿದರು.
ಹಾಸನದಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯಗಳ ಚಿತ್ರ, ದೃಶ್ಯವನ್ನು ಪೆನ್‍ಡ್ರೈವ್ ಮುಖಾಂತರ ಹಂಚಲಾಗಿದೆ. ಇವುಗಳೆಲ್ಲ ಸಾಮಾಜಿಕ ಜಾಲ ತಾಣದಲ್ಲೂ ಹರಿದಾಡುತ್ತಿವೆ. ಎಲ್ಲೆಡೆ ಈ ಕೃತ್ಯದ ಕುರಿತು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಚಿತ್ರದಲ್ಲಿರುವ ಮಹಿಳೆಯರ ಖಾಸಗಿ, ಕೌಟುಂಬಿಕ ಬದುಕು ಛಿದ್ರವಾಗಿದೆ. ಕೆಲವರೂ ಆತಹತ್ಯೆಗೆ ಪ್ರಯತ್ನಿಸಿರುವುದೂ ವರದಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ, ಹೊಳೆನರಸೀಪುರದಲ್ಲಿ ದಾಖಲಾಗಿರುವ ಇನ್ನೊಂದು ಪ್ರಕರಣದ ಮೊದಲ ಆರೋಪಿ ಶಾಸಕ ಎಚ್.ಡಿ.ರೇವಣ್ಣ ಅವರನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕು. ಜಾಮೀನು ಸಿಗದಂತೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಘಟನೆ ಬೆಳಕಿಗೆ ಬಂದ ತಕ್ಷಣವೇ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದ್ದರೆ ಲೈಂಗಿಕ ಹಗರಣದ ದೃಶ್ಯಗಳು ವ್ಯಾಪಕವಾಗಿ ಹಂಚಿಕೆಯಾಗದಂತೆ ತಡೆಯಬಹುದಿತ್ತು. ಸರ್ಕಾರಕ್ಕೆ ಮಹಿಳೆಯರ ಘನತೆಯ ಪ್ರಶ್ನೆಗಿಂತಲೂ ಚುನಾವಣಾ ರಾಜಕೀಯ ಪ್ರಮುಖವಾಗಬಾರದಿತ್ತು. ರಾಜಕೀಯ ಅಧಿಕಾರ, ಆಸ್ತಿ, ಜಾತಿಯ ಮದದಿಂದ ಮರೆಯುತ್ತಿರುವ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರನ್ನು ತನ್ನ ಕಾಮದಾಹಕ್ಕೆ ನಿರಂತರವಾಗಿ ಬಳಸಿಕೊಂಡು ತನ್ನ ಮೊಬೈಲ್ ಚಿತ್ರಿಸಿಕೊಂಡಿದ್ದಾನೆ ಎಂದು ಕಿಡಿಕಾರಿದರು.
ಇಡೀ ಪ್ರಕರಣದ ತನಿಖೆ ರಚನೆ ಮಾಡಿರುವ ವಿಶೇಷ ತನಿಖಾ ತಂಡವು(ಎಸ್‍ಐಟಿ) ಯಾವುದೇ ಒತ್ತಡಗಳಿಗೆ ಮಣಿಯದೆ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ರಕ್ಷಣೆ, ನ್ಯಾಯ ಒದಗಿಸಬೇಕು. ಸಾಕ್ಷಿಗಳಿಗೂ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಲೈಂಗಿಕ ಚಿತ್ರ, ದೃಶ್ಯವನ್ನು ಹಂಚಿಕೆ ಮಾಡಿದ ವ್ಯಕ್ತಿಗಳನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಿ ಬಂಧಿಸಬೇಕು. ಅಕ್ರಮ ನಡೆದಿರುವುದು ಗೊತ್ತಿದ್ದರೂ ಅದನ್ನುಟ್ಟುಕೊಂಡು ಅದು ಬಹಿರಂಗವಾಗಿ ಹರಿದಾಡಲು ಸಮಯ ಕಾದ ಬಿಜೆಪಿ ಮುಖಂಡ ಡಿ.ದೇವರಾಜೇಗೌಡ ಅವರನ್ನುವಿಚಾರಣೆಗೆ ಒಳಪಡಿಸಬೇಕು ಎಂದೂ ಒತ್ತಾಯಿಸಿದರು.
ಸಂತ್ರಸ್ತ ಮಹಿಳೆಯರ ವಿಷಯದಲ್ಲಿ ಗೌಪ್ಯತೆಯನ್ನು ಕಾಪಾಡಬೇಕು. ಅವರಿಗೆ ಸೂಕ್ತ ರಕ್ಷಣೆ ನೀಡಬೇಕು. ಅವರಿಗೆ ಪ್ರತ್ಯೇಕ ಕೌನ್ಸೆಲಿಂಗ್ ಕೇಂದ್ರ ತೆರೆಯಬೇಕು. ಪ್ರತ್ಯೇಕ ದೂರು ಕೇಂದ್ರ ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಮೇಯರ್ ನಾರಾಯಣ್, ಮುಖಂಡರಾದ ರತಿರಾವ, ಉಮಾದೇವಿ, ಕೆ.ಆರ್.ಸುಮತಿ, ಸವಿತಾ ಪ.ಮಲ್ಲೇಶ್, ಕೆ.ಎಸ್.ಶಿವರಾಮ್, ಗೋಪಾಲ್, ಸ್ಟ್ಯಾನ್ಲಿ, ಪೆÇ್ರ.ಕಾಳಚನ್ನೇಗೌಡ ಇನ್ನಿತರರು ಇದ್ದರು.