ಜನಪದ ಸಾಹಿತ್ಯದಲ್ಲಿ ಆಡುನುಡಿಯ ಸೊಗಡಿದೆ
ಸಂಜೆವಾಣಿ ನ್ಯೂಸ್
ಮೈಸೂರು : ಮೇ.05:- ಜನಪದ ಸಾಹಿತ್ಯದಲ್ಲಿ ಆಡುನುಡಿಯ ಸೊಗಡಿದೆ. ಗ್ರಾಮೀಣ ಜನಜೀವನದ ಸಂಸ್ಕೃತಿಯಿದೆ. ಈ ಜನಪದ ಸಾಹಿತ್ಯದ ಬಗ್ಗೆ ಮಕ್ಕಳು ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಹಾಗೂ ಕವಿ ಟಿ. ಸತೀಶ್ ಜವರೇಗೌಡ ಕರೆ ನೀಡಿದರು.
ಅದಮ್ಯ ರಂಗಶಾಲೆ ಹಾಗೂ ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ನಗರದ ವಿ.ವಿ. ಮೊಹಲ್ಲಾದ ಮಾತೃ ಮಂಡಲಿ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿರುವ ‘ಬಾಲಂಗೋಚಿ’ ಮಕ್ಕಳ ಬೇಸಿಗೆ ಶಿಬಿರದಲ್ಲಿ ನಡೆದ ‘ಚಿಣ್ಣರಿಗಾಗಿ ಜನಪದ ಸಾಹಿತ್ಯ ಕಮ್ಮಟ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜನಪದ ಸಾಹಿತ್ಯದಲ್ಲಿ ಗೀತೆ, ಕತೆ, ಶಿಶುಪ್ರಾಸ, ಗಾದೆ, ಒಗಟು, ಲಾವಣಿಗಳೆಲ್ಲವೂ ಇದ್ದು, ಓದು ಮತ್ತು ಬರಹ ಬಾರದ ಜನರು ಕಟ್ಟಿ ಹಾಡಿದ ಸಾಹಿತ್ಯವಾಗಿದೆ. ಇದು ಬಾಯಿಂದ ಬಾಯಿಗೆ ನಿರಂತರವಾಗಿ ಹರಿದು ಜನಮಾನಸದಲ್ಲಿ ಉಳಿದಿರುವ ಜೀವಂತಿಕೆಯಿರುವ ಸಾಹಿತ್ಯ ಎಂದು ಬಣ್ಣಿಸಿದರು.
ಜನಪದ ಸಾಹಿತ್ಯದಲ್ಲಿ ಮನ ಮುಟ್ಟುವ ಉತ್ತಮ ಭಾವನೆ, ವಿಚಾರ, ಜ್ಞಾನದ ಸೆಲೆಯಿದೆ. ಜಾನಪದ ಕಲೆಗಳೂ ಆಕರ್ಷಕವಾಗಿವೆ.
ಪೆÇೀಷಕರು ತಮ್ಮ ಮಕ್ಕಳಿಗೆ ಕನ್ನಡ ಜನಪದ ಸಾಹಿತ್ಯವನ್ನು ಪರಿಚಯಿಸಬೇಕು. ಜಾನಪದ ಸಂಸ್ಕೃತಿಯ ಕುರಿತ ಕಿರುಪುಸ್ತಕಗಳ ದೊರಕಿಸಿಕೊಡಬೇಕೆಂದು ಸಲಹೆ ನೀಡಿದರು.
ಕಮ್ಮಟ ಉದ್ಘಾಟಿಸಿದ ಜನಪರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ. ಮಹೇಶ್ ಚಿಕ್ಕಲೂರು ಮಾತನಾಡಿ, ಜನಪದ ಮನುಷ್ಯ ಸಂಬಂಧಗಳ ಮಹತ್ವ ತಿಳಿಸುತ್ತದೆ. ಜೊತೆಗೆ ಒಗ್ಗೂಡಿಸುವ ಕೆಲಸ ಮಾಡುತ್ತದೆ. ಆದ್ದರಿಂದ ಮಕ್ಕಳು ಟಿವಿ, ಮೊಬೈಲ್ ಹಾಗೂ ಕೆಟ್ಟ ಅಭಿರುಚಿಯ ಸಿನಿಮಾ ಹಾಡುಗಳಿಂದ ದೂರವಿದ್ದು, ಜಾನಪದದತ್ತ ವಾಲಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಮಾತೃ ಮಂಡಲಿ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷೆ ಎಂ. ವಿಜಯಲಕ್ಷ್ಮಿ ಅರಸ್ ಮಾತನಾಡಿ, ಮೊಬೈಲ್ ಸ್ಕ್ರೀನಿಗೆ ಅಡಿಕ್ಟ್ ಆಗಿರುವ ನಗರದ ಮಕ್ಕಳಿಗೆ ಹಳ್ಳಿಯ ಜನಪದ ಕಲೆ ಮತ್ತು ಸಾಹಿತ್ಯದ ಪರಿಚಯವಿರುವುದಿಲ್ಲ ಎಂದು ವಿಷಾದಿಸಿದ ಅವರು, ಮಕ್ಕಳು ಇಂತಹ ಕಮ್ಮಟದಲ್ಲಿ ಭಾಗಿಯಾಗುವುದರಿಂದ ನಮ್ಮ ಹಳ್ಳಿಯ ಜನಪದ ಸಂಸ್ಕೃತಿ ತಿಳಿಯುತ್ತದೆ ಎಂದರು.
ಕಮ್ಮಟದ ಸಂಪನ್ಮೂಲ ವ್ಯಕ್ತಿಗಳಾದ ಕವಯಿತ್ರಿ ಕೆರೋಡಿ ಎಂ. ಲೋಲಾಕ್ಷಿ ‘ಮಕ್ಕಳ ಜನಪದ ಕತೆಗಳು’ ಕುರಿತು, ಗಾಯಕ ಪರಮೇಶ್ ಕೆ. ಉತ್ತನಹಳ್ಳಿ ‘ಜನಪದ ಗೀತೆಗಳು’ ಕುರಿತು, ಕವಿ ಟಿ. ಸತೀಶ್ ಜವರೇಗೌಡ ‘ಮಕ್ಕಳ ಜನಪದ ಶಿಶುಪ್ರಾಸಗಳ’ ಕುರಿತು, ಲೇಖಕಿ ಗೌರಿ ಹೆಚ್. ಗೌಡ ‘ಜನಪದ ಗಾದೆಗಳ’ ಕುರಿತು ಪರಿಚಯಾತ್ಮಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಅದಮ್ಯ ರಂಗಶಾಲೆಯ ಕಾರ್ಯದರ್ಶಿ ಚಂದ್ರು ಮಂಡ್ಯ, ರಂಗ ಕಲಾವಿದರಾದ ಮನೋಜ್ ಅದಮ್ಯ, ಲೋಕನಾಥ್ ಸೋಗುಂ, ಕವಿಗಳಾದ ಸಿ.ಎಸ್. ರಾಘವೇಂದ್ರ, ಬಿ.ಎಲ್. ಪ್ರಭು ಉಪಸ್ಥಿತರಿದ್ದರು.