ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಿದ್ದೇವೆ: ಇ.ಒ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.05: ತೀವ್ರವಾದ ಬರಗಾಲದ ಸುಳಿಗೆ ತಾಲೂಕು ಸಿಲುಕಿದ್ದರೂ ಗ್ರಾಮೀಣ ಕುಡಿಯುವ ನೀರು ಪೂರೈಕೆಗೆ ಯಾವುದೇ ತೊಂದರೆಯಾಗದಂತೆ ತಾಲೂಕು ಪಂಚಾಯತಿ ಕ್ರಮವಹಿಸಿದೆ ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಸತೀಶ್ ತಿಳಿಸಿದ್ದಾರೆ.
ತಾಲೂಕು ಇಂದು ತೀವ್ರವಾದ ಬರಗಾಲದ ಸುಳಿಗೆ ಸಿಲುಕಿದೆ. ಮೇ ತಿಂಗಳ ಆಗಮನವಾಗಿದ್ದರೂ ಮಳೆರಾಯನ ಸುಳಿವು ಕಾಣುತ್ತಿಲ್ಲ. ನಿರೀಕ್ಷಿತ ಪ್ರಮಾಣದ ಮಳೆಯಾಗದೆ ಕೆರೆ-ಕಟ್ಟೆಗಳು ಬರಿದಾಗಿದ್ದು ಅಂತರ್ಜಲ ಮಟ್ಟ ಕುಸಿದಿದೆ. ಪರಿಸ್ಥಿತಿ ಗಂಭೀರವಾಗಿದ್ದರೂ ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಪ್ರತೀ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೂ ಕ್ರಮ ವಹಿಸಲಾಗಿದೆ. ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಸಮಸ್ಯೆಯಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ. ಗ್ರಾಮಗಳ ಜನಸಂಖ್ಯೆ ಆಧರಿಸಿ ಅಗತ್ಯ ಪ್ರಮಾಣದ ನೀರನ್ನು ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಗ್ರಾಮೀಣ ಕುಡಿಯುವ ನೀರು ಪೂರೈಕೆ ಜಾಲದ ಕೊಳವೆ ಬಾವಿಗಳು ಬತ್ತಿ ಹೋಗಿದ್ದರೆ ಅಂತಹ ಕಡೆ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದೆ. ಸಮಸ್ಯೆ ಇರುವ ಕಡೆ ಈಗಾಗಲೇ ಹೊಸದಾಗಿ 17 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಇದರಲ್ಲಿ ನಾಲ್ಕು ಕೊಳವೆ ಬಾವಿಗಳನ್ನು ರೀ ಬೋರ್ ಮಾಡಿಸಿದ್ದರೆ 13 ಕೊಳವೆ ಬಾವಿಗಳನ್ನು ಹೊಸದಾಗಿ ಕೊರೆಸಲಾಗಿದೆ. ಇದರಲ್ಲಿ 06 ಬಾವಿಗಳಲ್ಲಿ ನೀರು ದೊರಕಿದ್ದು ಉಳಿದ 07 ಕೊಳವೆ ಬಾವಿಗಳಲ್ಲಿ ನೀರು ಬಂದಿಲ್ಲ. ಬತ್ತಿ ಹೋಗಿರುವ ಕೊಳವೆ ಬಾವಿಗಳಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ ತಾಲೂಕಿನ 14 ಗ್ರಾಮ ಪಂಚಾಯತಿಗಳ ಸುಮಾರು 25 ಕ್ಕೂ ಹೆಚ್ಚು ಗ್ರಾಮಗಳಿಗೆ ಸಮರ್ಪಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ತಹಸೀಲ್ದಾರರ ಜೊತೆಗೂಡಿ ಗ್ರಾಮೀಣ ಪ್ರದೇಶದ ಕೊಳವೆ ಬಾವಿಗಳ ಸ್ಥಿತಿಗತಿಗಳು ಮತ್ತು ನೀರು ಪೂರೈಕೆ ವ್ಯವಸ್ಥೆಯನ್ನು ಖುದ್ದು ಪರಿಶೀಲನೆ ಮಾಡಲಾಗುತ್ತಿದೆ ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಸತೀಶ್ ತಿಳಿಸಿದ್ದಾರೆ.