ಶಾಸಕರ ಕಾರ್ಯವೈಖರಿಯನ್ನು ಕಾಂಗ್ರೆಸ್ ಖಂಡಿಸುತ್ತದೆ: ಬಿ.ಎಲ್.ಡಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.05: ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ನೀರು ಮತ್ತು ವಿದ್ಯುತ್ ವಿಚಾರದಲ್ಲಿ ರಾಜಕೀಯ ಬಿಟ್ಟು ಜನರಿಗೆ ವಾಸ್ತವ ಸಂಗತಿ ತಿಳಿಸಬೇಕು ಹೇಮಾವತಿ ಜಲಾಶಯ ಬರಿದಾಗಿರುವ ಸಂಗತಿ ಗೊತ್ತಿದ್ದರೂ ತಾಲೂಕಿನ ಕೆರೆ-ಕಟ್ಟೆಗಳಿಗೆ ಹೇಮೆಯ ನೀರು ಹರಿಸದೆ ರಾಜ್ಯ ಸರ್ಕಾರ ತಾರತಮ್ಯ ಮಾಡಿದೆ ಎಂದು ಸಲ್ಲದ ಅಪಪ್ರಚಾರ ಮಾಡುತ್ತಾ ಕ್ಷೇತ್ರದ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ನೀರು ಮತ್ತು ವಿದ್ಯುತ್ ಪೂರೈಕೆಯ ಬಗ್ಗೆ ಜನರಿಗೆ ತಪ್ಪು ಸಂದೇಶವನ್ನು ನೀಡುತ್ತಿರುವ ಶಾಸಕರ ಕಾರ್ಯವೈಕರಿಯನ್ನು ತಾಲೂಕು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ತಾಲೂಕು ಕಾಂಗ್ರೆಸ್ ಮುಖಂಡರು ತಿಳಿಸಿದರು.
ಪಟ್ಟಣದ ಹೇಮಾವತಿ ಬಡಾವಣೆಯಲ್ಲಿರುವ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ತಾಲೂಕು ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿ ನಡೆಸಿ ನೀರಿನ ವಿಚಾರದಲ್ಲಿ ಜನರನ್ನು ದಾರಿತಪ್ಪಿಸುತ್ತಿರುವ ಶಾಸಕರ ನಡೆಯನ್ನು ಖಂಡಿಸಿದರು.
ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು ಮಾತನಾಡಿ ಕಾವೇರಿ ಜಲ ವಿವಾದ ಇನ್ನೂ ಮುಗಿದಿಲ್ಲ. ನದಿ ನೀರು ಹಂಚಿಕೆಯ ವಿಚಾರದಲ್ಲಿ ಕಾವೇರಿ ನ್ಯಾಯಾಧೀಕರಣದ ತೀರ್ಪನ್ನು ನಾವು ಪಾಲಿಸಲೇಬೇಕಾಗಿದೆ. ಕಾವೇರಿ ನ್ಯಾಯಾಧೀಕರಣ ನೀರು ಹಂಚಿಕೆಗಾಗಿ ನೀರು ನಿರ್ವಹಣಾ ಸಮಿತಿಯನ್ನು ರಚಿಸಿದೆ. ನೀರು ನಿರ್ವಹಣಾ ಸಮಿತಿ ನೇಮಿಸಿರುವ ತಾಂತ್ರಿಕ ಸಮಿತಿಯ ಸೂಚನೆಯ ಮೇರೆಗೆ ಪ್ರತಿ ತಿಂಗಳೂ ತಮಿಳುನಾಡಿಗೆ ನೀರು ಹರಿಸಲೇಬೇಕಾಗಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಜಿಲ್ಲೆಯ ರೈತರು ನೀರಿಗಾಗಿ ಬೇಡಿಕೆಯಿಟ್ಟು ಹೋರಾಟ ಮಾಡುತ್ತಿದ್ದಾಗ ಕಾವೇರಿ ಕಣಿವೆಯ ಅಣೆಕಟ್ಟೆಗಳ ಬೀಗದ ಕೀ ನನ್ನ ಬಳಿಯಿಲ್ಲ ಎನ್ನುತ್ತಿದ್ದರು. ಈಗ ನಮ್ಮ ಅಣೆಕಟ್ಟೆಗಳ ಬೀಗದ ಕೀ ನಮ್ಮ ಬಳಿಯೇ ಇದೆ. ಆದರೆ ನಮಗೆ ಬೇಕಾದಂತೆ ನೀರು ಬಿಟ್ಟುಕೊಳ್ಳುವ ಅಧಿಕಾರ ನಮಗಿಲ್ಲ. ಕಾವೇರಿ ನ್ಯಾಯಾಧೀಕರಣದ ಆದೇಶಗಳನ್ನು ನಾವು ಮೀರಿದರೆ ಕೇಂದ್ರ ಸರ್ಕಾರ ಮಿಲಿಟರಿ ತಂದು ನಮ್ಮ ಅಣೆಕಟ್ಟೆಗಳ ಬೀಗದ ಕೀ ಕಿತ್ತುಕೊಳ್ಳುತ್ತದೆ. ತೀವ್ರ ಬರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೇಮಾವತಿ ಜಲಾಶಯದಿಂದ ಒಂದಷ್ಟು ಪ್ರಮಾಣದ ನೀರನ್ನು ನೆರೆಯ ತುಮಕೂರು ಜಿಲ್ಲೆಗೆ ಬಿಟ್ಟಿದೆ. ಇದು ಮಾನವೀಯ ನೆಲೆಗಟ್ಟಿನಲ್ಲಿ ತೆಗೆದುಕೊಂಡ ನಿರ್ಧಾರ. ಇದೇ ರೀತಿ ಈಗಾಗಲೇ ಎರಡು ಸಲ ತಾಲೂಕಿನ ಜನರ ಕುಡಿಯುವ ನೀರಿನ ಸಮಸ್ಯೆ ಗಮನಿಸಿ ಹೇಮಾವತಿ ನದಿಯ ಹೊರ ಹರಿವನ್ನು ಹೆಚ್ಚಿಸಿದೆ. ಇದರ ಅರಿವಿದ್ದರೂ ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ರಾಜ್ಯ ಸರ್ಕಾರ ಕೆ.ಆರ್.ಪೇಟೆ ತಾಲೂಕಿನ ಕೆರೆ-ಕಟ್ಟೆಗಳನ್ನು ಹೇಮೆಯ ನೀರಿನಿಂದ ತುಂಬಿಸುವಲ್ಲಿ ತಾರತಮ್ಯ ಮಾಡಿದೆ ಎಂದು ಜನರಲ್ಲಿ ರಾಜ್ಯ ಸರ್ಕಾರದ ವಿರುದ್ದ ತಪ್ಪು ಭಾವನೆ ಬರುವಂತೆ ಮಾಡುತ್ತಿದ್ದಾರೆ. ಕುಡಿಯುವ ನೀರಿಗೆ ಬರ ಬಂದಿರುವಾಗ ಬೆಳೆ ರಕ್ಷಣೆಗೆ ನೀರು ಬಿಡಲು ಸಾಧ್ಯವಿಲ್ಲ. ಹೇಮೆಯ ನೀರು ಬಿಡುವ ವಿಚಾರದಲ್ಲಿ ಕ್ಷೇತ್ರದ ಶಾಸಕರು ಸರ್ಕಾರಕ್ಕೆ ಕೇವಲ ಪತ್ರ ಬರೆದರೆ ಸಾಲದು. ವಾಸ್ತವತೆಯ ನೆಲೆಗಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದರು.
ಟಾಸ್ಕ್ ಪೆÇೀರ್ಸ್ ಸಭೆ ಕರೆಯಿರಿ:- ಕ್ಷೇತ್ರದಲ್ಲಿ ತೀವ್ರವಾದ ಕುಡಿಯುವ ನೀರಿನ ಸಮಸ್ಯೆಯಿದೆ. ತಾಲೂಕಿನ 14 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಚುನಾವಣೆಗೂ ಬರ ನಿರ್ವಹಣಾ ಸಮಿತಿಯ ಸಭೆ ಕರೆದು ಕುಡಿಯುವ ನೀರಿನ ವ್ಯವಸ್ಥೆಯ ಪರಿಶೀಲನೆ ಮಾಡುವುದಕ್ಕೂ ಯಾವುದೇ ಸಂಬಂಧವಿಲ್ಲ. ಚುನಾವಣೆ ಮುಗಿದಿದ್ದರೂ ಶಾಸಕರು ಇದುವರೆಗೂ ಟಾಸ್ಕ್ ಪೆÇೀರ್ಸ್ ಸಭೆ ನಡೆಸಿ ಅಧಿಕಾರಿಗಳೊಂದಿಗೆ ಕುಡಿಯುವ ನೀರು ನಿರ್ವಹಣೆಯ ಬಗ್ಗೆ ರ್ಚಿಸಿಲ್ಲ. ಜನರಿಗೆ ಪೂರೈಕೆ ಮಾಡುತ್ತಿರುವ ಟ್ಯಾಂಕರ್ ನೀರಿನ ಗುಣಮಟ್ಟ ಪರಿಶೀಲನೆಯಾಗುತ್ತಿಲ್ಲ. ಕ್ಷೇತ್ರದಲ್ಲಿ ನೀರು ಮತ್ತು ವಿದ್ಯುತ್ ಸಮಸ್ಯೆ ಉಲ್ಬಣಗೊಂಡಿದೆ. ತಾಲೂಕಿನ ಮಡುವಿನಕೋಡಿ ಮತ್ತು ಮಂಚಿಬೀಡು ವಿದ್ಯುತ್ ವಿತರಣಾ ಘಟಕಗಳು ಇನ್ನು ನಾಲ್ಕು ತಿಂಗಳಲ್ಲಿ ಕಾರ್ಯಾರಂಭ ಮಾಡಲಿವೆ. ರಾಜ್ಯ ಸರ್ಕಾರ ಶಕ್ತಿ ಮೀರಿ ಜನರ ಸಮಸ್ಯೆಗಳಿಗೆ ಸ್ಪಂಧಿಸುತ್ತಿದೆ. ಶಾಸಕರಾದ ನೀವು ನಿಮ್ಮ ಅಧಿಕಾರ ಬಳಸಿ ಅಧಿಕಾರಿಗಳ ಸಭೆ ಕರೆಯಿರಿ. ಅಧಿಕಾರಿಗಳನ್ನು ನಿಯಂತ್ರಿಸಿ ಜನರ ಕಷ್ಠ ಸುಖಗಳ ಪರಿಹಾರಕ್ಕೆ ಅವರನ್ನು ನಿಯೋಜಿಸಿ. ಅದನ್ನು ಬಿಟ್ಟು ರಾಜ್ಯ ಸರ್ಕಾರ ಕ್ಷೇತ್ರದ ಅಭಿವೃದ್ದಿಯ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಸುಳ್ಳು ಹೇಳಿ ಜನರನ್ನು ದಾರಿತಪ್ಪಿಸುವ ಕೆಲಸ ಮಾಡಬೇಡಿ ಎಂದು ಬಿ.ಎಲ್.ದೇವರಾಜು ಆಗ್ರಹಿಸಿದರು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ ಹೇಮಾವತಿ ಜಲಾಶಯ ಹಾಸನ ಜಿಲ್ಲಾ ಉಸ್ತುವಾರಿ ಸಚಿವರ ನಿಯಂತ್ರಣದಲ್ಲಿದೆ. ಜಲಾಶಯ ನೀರು ನಿರ್ವಹಣಾ ಸಮಿತಿಯಲ್ಲಿ ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ಕೂಡ ಸದಸ್ಯರು. ತಾಲೂಕಿನ ಜನರಿಗೆ ಹೇಮೆ ನೀರು ಬಿಡುವಲ್ಲಿ ತಾರತಮ್ಯವಾಗಿದ್ದರೆ ಕ್ಷೇತ್ರದ ಶಾಸಕರು ಇದನ್ನು ಹಾಸನ ಜಿಲ್ಲಾ ಉಸ್ತುವಾರಿ ಸಚಿವರು, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ನೀರಾವರಿ ಸಚಿವರ ಗಮನಕ್ಕೆ ತರಬೇಕು. ಅವರಿಂದಲೂ ನ್ಯಾಯ ದೊರಕದಿದ್ದರೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನೀರಿಗಾಗಿ ಒತ್ತಾಯ ಮಾಡಬೇಕು. ಅದನ್ನು ಬಿಟ್ಟು ನೀರು ಬಿಡಿ ಎಂದು ಕೇವಲ ಪತ್ರ ಬರೆದರೆ ಸಾಲದು. ಪಕ್ಷ ರಾಜಕಾರಣವನ್ನು ಬದಿಗೊತ್ತಿ ಕ್ಷೇತ್ರದ ಅಭಿವೃದ್ದಿಯ ವಿಚಾರದಲ್ಲಿ ನಾನೂ ಸೇರಿದಂತೆ ಕ್ಷೇತ್ರದ ಎಲ್ಲಾ ಹಿರಿಯ ರಾಜಕಾರಣಿಗಳ ಸಲಹೆ ಸಹಕಾರ ಪಡೆಯಿರಿ. ಕ್ಷೇತ್ರದ ಅಭಿವೃದ್ದಿಗೆ ಕಾಂಗ್ರೆಸ್ ಪಕ್ಷ ನಿಮಗೆ ಸಹಕಾರ ಕೊಡುತ್ತದೆ ಎಂದು ಕಿವಿಮಾತು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರುಗಳಾದ ಕೋಡಿಮಾರನಹಳ್ಳಿ ದೇವರಾಜು, ಶೀಳನೆರೆ ಅಂಬರೀಶ್, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಐಚನಹಳ್ಳಿ ಶಿವಣ್ಣ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್, ಪಕ್ಷದ ಪರಿಶಿಷ್ಠ ಜಾತಿ ವಿಭಾಗದ ಮುಖಂಡರುಗಳಾದ ರಾಜಯ್ಯ, ಬಸ್ತಿ ರಂಗಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಎನ್.ದಿವಾಕರ್ ಸುದಿಗೋಷ್ಠಿಯಲ್ಲಿದ್ದು ಮಾತನಾಡಿದರು.