ಹರಪನಹಳ್ಳಿಯಲ್ಲಿ ಹರಿದುಬಂದ ಜನಸಾಗರ: ಜಿ. ಬಿ. ವಿನಯ್ ಕುಮಾರ್ ಜನರ ಜೈಕಾರ
ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೫: ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಅವರು ಹರಪನಹಳ್ಳಿಯಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಗ್ರಾಮ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನಸಾಗರವೇ ಹರಿದು ಬಂದಿತ್ತು. ಎಲ್ಲಿ ನೋಡಿದರೂ ಜನವೋ ಜನರು ಕಂಡು ಬಂದರು. ಜನರ ಪ್ರೀತಿಗೆ ವಿನಯ್ ಕುಮಾರ್ ಅವರು ಖುಷಿಯಾದರು.ಹರಪನಹಳ್ಳಿಗೆ ವಿನಯ್ ಕುಮಾರ್ ಅವರು ಆಗಮಿಸುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ ಅದ್ಧೂರಿಯಾಗಿ ಸ್ವಾಗತ ನೀಡಿತಲ್ಲದೇ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಿನಯ್ ಕುಮಾರ್ ಅವರಿಗೆ ಜೈಕಾರ, ಸಿಲಿಂಡರ್ ಘೋಷಣೆಗಳು ಮುಗಿಲುಮುಟ್ಟಿದವು. ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರೆ, ಯುವಕರು ನೃತ್ಯ ಮಾಡಿ ಗಮನ ಸೆಳೆದರು.ಕಿಲೋಮೀಟರ್ ಗಟ್ಟಲೇ ನೆರೆದಿದ್ದ ಸಾವಿರಾರು ಜನರು ಬಿಸಿಲಿನ ಝಳ ಲೆಕ್ಕಿಸದೇ ಹೆಜ್ಜೆ ಹಾಕಿದರು. ಸ್ವಾಭಿಮಾನಿ ವಿನಯ್ ಕುಮಾರ್ ಗೆ ಜೈ, ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡೋಣ. ಈ ಬಾರಿ ದಾವಣಗೆರೆ ಜಿಲ್ಲೆಯಲ್ಲಿ ಹೊಸ ಇತಿಹಾಸ ಬರೆಯೋಣ ಎಂಬ ಘೋಷಣೆಗಳು ಕೇಳಿ ಬಂದವು.
ಹರಪ್ಪನಹಳ್ಳಿಯ ಹರಿಹರ ವೃತ್ತದಿಂದ ಆರಂಭವಾದ ಬೃಹತ್ ರೋಡ್ ಶೋ ತೆಕ್ಕದಗರಡಿಕೇರೆ, ಅರಸಿಕೇರ ರಸ್ತೆ, ಕೋರಮರ ಓಣಿ,ವಾಲ್ಮೀಕಿ ನಗರ, ಐಬಿ ವೃತ್ತದಿಂದ ಕೊಟ್ಟೂರು ವೃತ್ತದ ಮುಖ್ಯರಸ್ತೆ, ಮೆಗಳಪೇಟೆ ಸಾಗಿದ ಮೂಲಕ ಸಾಗಿ ಹರಪ್ಪನಹಳ್ಳಿಯ ಬಸ್ ನಿಲ್ದಾಣ ತಲುಪಿ ಮುಕ್ತಾಯಗೊಂಡಿತು. ಯಾವ ರಾಷ್ಟ್ರೀಯ ಪಕ್ಷಗಳಿಗೂ ಕಡಿಮೆ ಏನಿಲ್ಲ ಎಂಬಂತೆ ಮೆರವಣಿಗೆ ಸಾಗಿತು. ವಾದ್ಯಗಳು, ತಮಟೆ ಸದ್ದು ಮೆರವಣಿಗೆಗೆ ಮತ್ತಷ್ಟು ರಂಗು ನೀಡಿತು. ಎಲ್ಲೆಲ್ಲೂ ವಿನಯ್ ಕುಮಾರ್ ಭಾವಚಿತ್ರ, ಸ್ವಾಭಿಮಾನಿ ಸಂಕೇತವೂ ರಾರಾಜಿಸಿತು.