ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಎಂದು ಪಾಕಿಸ್ತಾನ ಬಯಸುತ್ತಿದೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೫ : ರಾಷ್ಟ್ರೀಯತೆ, ಅಭಿವೃದ್ಧಿ ಹೆಸರಿನಲ್ಲಿ ಬಿಜೆಪಿ ಮತಯಾಚನೆ ಮಾಡುತ್ತಿದೆ. ಭಯೋತ್ಪಾದನೆ ಪೋಷಿಸುತ್ತಿರುವ, ಭಾರತದ ಅಭಿವೃದ್ಧಿ ಸಹಿಸದೇ ಇರುವ ಪಾಕಿಸ್ತಾನ ರಾಹುಲ್ ಗಾಂಧಿ ಪ್ರಧಾನಿ ಆಗಲಿ ಎಂದು ಬಯಸುತ್ತಿದೆ. ಇದರ ಅರ್ಥ ಏನು…? ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಪ್ರಶ್ನಿಸಿದರು.ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಮನೂರು, 33, 34, 36 ನೇ ವಾರ್ಡ್, ತರಳುಬಾಳು, ವಿನಾಯಕ ಬಡಾವಣೆಯಲ್ಲಿ ಮತಯಾಚಿಸಿ ಮಾತನಾಡಿದ ಅವರು, ಭಾರತ ಪುನಃ ಭಯೋತ್ಪಾದನೆಗೆ ಗುರಿಯಾಗಬೇಕು, ಭಯೋತ್ಪಾದಕರು ಭಾರತದಲ್ಲಿ ಅಟ್ಟಹಾಸ ಮೆರಿಯಬೇಕು, ಭಾರತದ ಅಭಿವೃದ್ಧಿ ಕುಂಠಿತವಾಗಬೇಕು ಎಂದು ಪಾಕಿಸ್ತಾನ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಲು ಹೊರಟಿದೆ. ಇಂತಹ ಷಡ್ಯಂತ್ರಕ್ಕೆ ನಿಜವಾದ ಭಾರತೀಯರು ಉತ್ತರ ನೀಡಬೇಕು ಎಂದರೆ ಬಿಜೆಪಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಬೇಕು ಎಂದು ಕರೆ ನೀಡಿದರು.ನರೇಂದ್ರ ಮೋದಿ ಜೀ ಅವರಂತಹ ಗಂಡೆದೆಯ ನಾಯಕ ಇರುವಾಗಲೇ ಬೆಂಗಳೂರಿನ ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗುತ್ತಿದ್ದಾರೆ. ಹಾಡು ಹಗಲೇ ಕಾಲೇಜು ಕ್ಯಾಂಪಸ್ನಲ್ಲಿ ವಿದ್ಯಾರ್ಥಿಯರ ಹತ್ಯೆ ಮಾಡುತ್ತಾರೆ. ಅಂಗಡಿಗಳಲ್ಲಿ ಹನುಮಾನ್ ಚಾಲೀಸ್ ಪಠಣ ಮಾಡಿದರೆ ಹಲ್ಲೆ ಮಾಡುತ್ತಿದ್ದಾರೆ. ಇನ್ನು ಈ ದೇಶಕ್ಕೆ ರಾಹುಲ್ ಗಾಂಧಿಯಂತಹ ದುರ್ಬಲರು ಪ್ರಧಾನಿಯಾದರೆ ಈ ದೇಶವನ್ನು ಯಾರು ಕಾಪಾಡುತ್ತಾರೆ. ಈ ಬಗ್ಗೆ ಪ್ರಜ್ಞಾವಂತರು ಯೋಚಿಸಿ ಮತಹಾಕಬೇಕು ಎಂದು ಮನವಿ ಮಾಡಿದರು.ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ದೃಷ್ಕೃತ್ಯಗಳನ್ನು ಸುಲಭವಾಗಿ ನಡೆಸಬಹುದು ಎಂಬುದು ಪಾಕಿಸ್ತಾನದ ಲೆಕ್ಕಾಚಾರ. ನರೇಂದ್ರ ಮೋದಿ ಜೀ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ 10 ವರ್ಷಗಳಲ್ಲಿ ನಮ್ಮ ತಂಟೆಗೆ ಬಂದವರನ್ನು ಅವರ ನೆಲಕ್ಕೆ ನುಗ್ಗಿ ಹಡೆಮುರಿ ಕಟ್ಟಿದ್ದೇವೆ. ದಾವಣಗೆರೆಯಲ್ಲೂ ಕಾಂಗ್ರೆಸ್ ಗೆಲ್ಲಬೇಕು ಎನ್ನುವ ಮನಸ್ಥಿತಿ ಇರುವವರು ಈ ಬಗ್ಗೆ  ಸ್ವಲ್ಪ ಯೋಚಿಸಿ ಮತದಾನ ಮಾಡಿ. ದಿಟ್ಟ ನಾಯಕತ್ವದ ಮೋದಿ ಜೀ ಮತ್ತೊಮ್ಮೆ ಪ್ರಧಾನಿ ಹುದ್ದೆಯಲ್ಲಿ ವಿರಾಜಮಾನವಾಗಬೇಕು ಎಂದರೆ ನೀವು ಕಮಲದ ಗುರುತಿಗೆ ಮತ ನೀಡಿ ನನ್ನು ಗೆಲ್ಲಿಸಬೇಕು ಎಂದರು.ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬರುವುದು ಗ್ಯಾರಂಟಿ. ಜೂನ್ 4 ರ ನಂತರ ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗುತ್ತದೆ. ನಿಮ್ಮ ಅಮೂಲ್ಯ ಮತ ಕಾಂಗ್ರೆಸ್ಗೆ ನೀಡಿದರೆ ವ್ಯರ್ಥವಾಗತ್ತೆ. ಬಿಜೆಪಿಗೆ ನೀಡಿದರೆ ಸಾರ್ಥಕವಾಗುತ್ತೆ. ನರೇಂದ್ರ ಮೋದಿ ಜೀ ಮತ್ತೊಮ್ಮೆ ಪ್ರಧಾನಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಮೋದಿ ಜೀ ಮೂರನೇ ಅವಧಿಗೆ ಪ್ರಧಾನಿ ಆಗಬೇಕು ಎಂದು ಇಡೀ ದೇಶದ ಜನ ನಿರ್ಧಾರ ಮಾಡಿದ್ದಾರೆ. ಗಾಯಿತ್ರಿ ಸಿದ್ದೇಶ್ವರ್ ಅವರನ್ನು ಗೆಲ್ಲಿಸಬೇಕು ಎಂದು ಕ್ಷೇತ್ರದ ಜನ ಸಂಕಲ್ಪ ಮಾಡಿದ್ದಾರೆ. ನಾವು ಈಗಾಗಲೇ ಗೆದಿದ್ದೇವೆ. ಹೆಚ್ಚಿನ ಲೀಡ್ಗಾಗಿ ನಾವು, ನಮ್ಮ ಕಾರ್ಯಕರ್ತರು ಪ್ರಯತ್ನ ಮಾಡುತ್ತಿದ್ದೇವೆ ಎಂದರು.ನನ್ನ ಪತಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ದಾವಣಗೆರೆ ನಗರಕ್ಕೆ ಕೋಟ್ಯಂತರ ರೂಪಾಯಿ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ಅನುದಾನ ತಂದಿದ್ದು ಜಿ.ಎಂ.ಸಿದ್ದೇಶ್ವರ್. ಆದರೆ, ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಅವರ ತಂದೆ ಕೆಲವೊಂದು ಕಾಮಗಾರಿಗಳಲ್ಲಿ ಹಸ್ತಕ್ಷೇಪ ಮಾಡಿ ಅವೈಜ್ಞಾನಿಕ ಕಾಮಗಾರಿ ಮಾಡಿಸಿದ್ದಾರೆ ಎಂದು ಆರೋಪಿಸಿದರು. ಅಶೋಕ ರೈಲ್ವೆ ಗೇಟ್ ಬಳಿ ಲಭ್ಯವಿರುವ ಜಾಗ ಬಳಸಿ, ಸಣ್ಣ ವಾಹನ ಓಡಾಡಲು ಸೇತುವೆ ನಿರ್ಮಾಣ ಮಾಡಿದ್ದೇವೆ. ಮುಂದುವರಿದ ಭಾಗವಾಗಿ ಪದ್ಮಾಂಜಲಿ ಚಿತ್ರಮಂದಿರದ ಬಳಿ 2 ಬೃಹತ್ ಗಾತ್ರದ ವೆಂಟ್ಗಳುಳ್ಳ ಸೇತುವೆ ನಿರ್ಮಾಣಕ್ಕೆ 49 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದೇವೆ. ಪ್ರಥಮ ಆದ್ಯತೆ ಮೇರೆಗೆ ಕಾಮಗಾರಿ ಪೂರ್ಣಗೊಳ್ಳಿಸುತ್ತೇವೆ ಎಂದರು.ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ, ಸಂಸದ ಜಿ.ಎಂ.ಸಿದ್ದೇಶಣ್ಣ ಮಾಡಿರುವ ಅಭಿವೃದ್ಧಿ ಕೆಲಸಗಳೇ ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆ. ದೇಶದಲ್ಲಿ ಮೋದಿ ಹವಾ ಬಿಟ್ಟರೆ ಬೇರೆಯವರ ಹವಾ ಇಲ್ಲ. ರಾಹುಲ್ ಗಾಂಧಿ ಪ್ರಚಾರಕ್ಕೆ ಹೋದ ಕಡೆಯಲ್ಲ ಬಿಜೆಪಿ ಭರ್ಜರಿ ಮತಗಳ ಅಂತರದಿಂದ ಗೆದ್ದಿದೆ. ಅದಕ್ಕಾಗಿ ಈಗ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅವರನ್ನು ಪ್ರಚಾರಕ್ಕೆ ಕಳುಹಿಸುತ್ತಿದ್ದಾರೆ. ದಾವಣಗೆರೆಯಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ 1.5 ಲಕ್ಷ ಲೀಡ್ನಲ್ಲಿ ಗೆಲ್ಲುತ್ತಾರೆ ಎಂದುಕೊಂಡಿದ್ದೇವು. ಪ್ರಿಯಾಂಕಾ ಗಾಂಧಿ ಬಂದು ಹೋದ ಮೇಲೆ ನಾವು 3 ಲಕ್ಷ ಲೀಡ್ನಲ್ಲಿ ಗೆಲ್ಲುತ್ತೇವೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.