ಜನಪದ ಉತ್ಸವಗಳು ಭಾವೈಕ್ಯತೆ ಸಾರುತ್ತವೆ : ಪ್ರೊ. ಬಿ.ಎಸ್.ಬಿರಾದಾರ
ಬೀದರ:ಸೆ.22: ಜನಪದ ಸಂಗೀತ, ಹಾಡುಗಳು, ಜಾತ್ರೆಗಳು ಮತ್ತು ಉತ್ಸವಗಳು ಸಮಾಜದಲ್ಲಿ ಭಾವೈಕ್ಯತೆಯನ್ನು ಸಾರುತ್ತವೆ. ಜನಪದ ಉಳಿಸಿದರೆ ಮುಂದಿನ ಪೀಳಿಗೆಗೆ ಅದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ. ಬಿ.ಎಸ್.ಬಿರಾದಾರ ತಿಳಿಸಿದರು
ಕರ್ನಾಟಕ ಜಾನಪದ ಪರಿಷತ್ತು, ಶುಕ್ಲತೀರ್ಥ ಮಡಿವಾಳೇಶ್ವರ ಸಾಮಾಜಿಕ ಮತ್ತು ಸಾಂಸ್ಕøತಿಕ ಅಭಿವೃದ್ಧಿ ಟ್ರಸ್ಟ್ ನಾವದಗೇರಿ, ಸಂಸ್ಕೃತಿ ಮಂತ್ರಾಲಯ ನವದೆಹಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ನಾವದಗೇರಿಯ ಶುಕ್ಲತೀರ್ಥ ಮಡಿವಾಳೇಶ್ವರ ಮಂದಿರದಲ್ಲಿ ಜರುಗಿದ ಬೀದರ ಜಿಲ್ಲಾ ಜಾನಪದ ಉತ್ಸವ ಹಾಗೂ ನಮ್ಮೂರು ನಾವದಗೇರಿ ಜಾನಪದ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನಪದ ಎಂಬುದು ಮಾನವನ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿ ತುಂಬಿಕೊಂಡ ಸತ್ಯ ಆಚಾರ ವಿಚಾರವಾಗಿದೆ. ಜನಪದ ಇಲ್ಲದ ಮನುಷ್ಯನ ಆಚರಣೆಗಳು, ವಿಚಾರಗಳು ಅಪೂರ್ಣ. ಜನಪದ ಆಹಾರ-ವಿಹಾರಗಳು ವ್ಯಕ್ತಿಯನ್ನು ಸಂಸ್ಕಾರಯುತ ಬದುಕಿನೆಡೆಗೆ ಕೊಂಡೊಯ್ಯುತ್ತವೆ. ಇಂದಿನ ಬಹುತೇಕ ದುರ್ಘಟನೆಗಳಿಗೆ ಆಧುನಿಕ ಸಂಸ್ಕೃತಿಯೇ ಕಾರಣವಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಜನಪದ ಸಂಸ್ಕೃತಿಯನ್ನು ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಅವುಗಳನ್ನು ತಿಳಿಸುವ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮಾಡುತ್ತಿರುವ ಕಾರ್ಯ ಸ್ಮರಣೀಯ ಎಂದರು.
ಬೀದರ ನಗರಸಭೆ ಅಧ್ಯಕ್ಷ ಮೊಹಮ್ಮದ್ ಗೌಸ್ ಮಾತನಾಡಿ ಹಲವು ದಶಕಗಳಿಂದ ಶುಕ್ಲತೀರ್ಥ ಮಡಿವಾಳೇಶ್ವರ ಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿರುವುದು ಭಾವೈಕ್ಯತೆಗೆ ಇನ್ನೊಂದು ಸಾಕ್ಷಿಯಾಗಿದೆ. ಇಲ್ಲಿ ಎಲ್ಲಾ ಧರ್ಮಿಯರು ಪಾಲ್ಗೊಂಡು ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಕಾರ್ಯ. ಮಂದಿರದ ಏಳ್ಗೆಗೆ ಸಹಾಯ ಹಸ್ತ ಚಾಚಲಾಗುವುದು ಎಂದರು.
ವೇದಿಕೆ ಮೇಲೆ ಸೊಂತ ಶ್ರೀಗಳು, ಪೂಜ್ಯ ಹವಾ ಮಲ್ಲಿನಾಥ ಮಹಾರಾಜರು ಸೇರಿದಂತೆ ವಿವಿಧ ಮಠಾಧೀಶರು ಉಪಸ್ಥಿತರಿದ್ದರು. ನಗರಸಭೆ ಸದಸ್ಯ ಪ್ರಶಾಂತ ದೊಡ್ಡಿ, ಉದ್ಯಮಿ ಅಶೋಕ ಹೆಬ್ಬಾಳೆ, ಹಿಂದೂ ಧರ್ಮ ಚಿಂತಕ ಈಶ್ವರಸಿಂಗ್ ಠಾಕೂರ್ ಹಾಜರಿದ್ದರು.
ಗಮನ ಸೆಳೆದ ಜೀವನಸಾಬ ಬಿನ್ನಾಳ ಜನಪದ ಗಾಯನ: ಅಂತರಾಷ್ಟ್ರೀಯ ಕಲಾವಿದ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ಜೀವನಸಾಬ ಬಿನ್ನಾಳ ಅವರ ಜನಪದ ಗಾಯನ ಸಬೀಕರ ಗಮನ ಸೆಳೆಯಿತು. ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ವಚನ, ಜಾನಪದ, ಲಾವಣಿ ಹಾಡುಗಳನ್ನು ಹಾಡುತ್ತ ಮನರಂಜಿಸಿದರು. ಪ್ರೇಕ್ಷಕರು ಜೀವನಸಾಬ್ ಅವರ ಜಾನಪದ ಝೇಂಕಾರಕ್ಕೆ ತಲೆದೂಗಿದರು.
ವಿವಿಧ ತಂಡಗಳಿಂದ ಜನಪದ ನೃತ್ಯ: ಬಸವರಾಜ ಕಟ್ಟಿಮನಿ, ದಾನೇಶ್ವರಿ ಮೇಲಿನಮಠ, ಆಶಾಬಾಯಿ ರಾಠೋಡ್, ಶೇಷಪ್ಪ ಚಿಟ್ಟಾ, ಪವನ ನಾಟೇಕರ್, ಸತೀಷ ಡೊಳ್ಳು ಕುಣಿತ ಆಕರ್ಷಕವಾಗಿತ್ತು.
ಇದೇ ವೇಳೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಶುಕ್ಲತೀರ್ಥ ಸೇವಾ ಸಮಿತಿ ಅಧ್ಯಕ್ಷ ಸಂತೋಷ ಕಾಮಣ್ಣಾ, ಪ್ರಧಾನ ಕಾರ್ಯದರ್ಶಿ ಸಾಯಿನಾಥ ಮಡಿವಾಳ, ಉಪಾಧ್ಯಕ್ಷ ಬಸವರಾಜ ಬಿರಾದಾರ, ರವಿ ಕಣಜಿ, ಸಾಯಿನಾಥ ಕಣಜಿ, ರಾಜಕುಮಾರ ಮಾಳಗೆ, ಅಶೋಕ ಬರಿದಾಬಾದ, ರಾಜಕುಮಾರ ಜಮಾದಾರ, ರಾಜಕುಮಾರ ಡೊಂಗರಗಿ, ಅನೀಲಕುಮಾರ ರಾಜಗಿರಾ, ಸಂಗಮೆಶ ಬೀಕ್ಲೆ, ಭಕ್ತರಾಜ ಪಾಟೀಲ, ಮಡಿವಾಳಯ್ಯ ಸ್ವಾಮಿ, ರಾಜಕುಮಾರ ಗುನ್ನಳ್ಳಿ ಉಪಸ್ಥಿತರಿದ್ದರು.
ಎಸ್.ಬಿ.ಕುಚಬಾಳ ನಿರೂಪಿಸಿದರು. ಓಂಕಾರ ಬಜಾರೆ ಸ್ವಾಗತಿಸಿದರು. ಡಾ. ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿದರು. ಸಂತೋಷ ಕಾಮಣ್ಣ ವಂದಿಸಿದರು.