ಸ್ವಚ್ಛತೆ ಪ್ರತಿಯೊಬ್ಬರ ಪ್ರಥಮ ಆದ್ಯತೆಯಾಗಲಿ:ಬಸವರಾಜ ಬಬಲಾದ
ಇಂಡಿ: ಸೆ.22:ಪ್ರತಿಯೊಬ್ಬ ನಾಗರಿಕರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದಾಗ ಮಾತ್ರ ಮಹಾತ್ಮ ಗಾಂಧೀಜಿ ಕನಸಿನ ಸ್ವಚ್ಛ ಭಾರತದ ಕನಸು ನನಸಾಗುತ್ತದೆ ಎಂದು ಹಿರೇರೂಗಿ ಪಿಡಿಓ ಬಸವರಾಜ ಬಬಲಾದ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಹಾಗೂ ಬೋಳೆಗಾಂವ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡ ‘ಸ್ವಚ್ಛತೆಯೇ ಸೇವೆ’-ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಚ್ಛತೆ ಪ್ರತಿಯೊಬ್ಬ ನಾಗರಿಕನ ಪ್ರಥಮ ಆದ್ಯತೆಯಾಗಬೇಕು. ನಮ್ಮ ಮನೆ ಸುತ್ತಮುತ್ತಲಿನ ಪ್ರದೇಶ, ರಸ್ತೆ, ಚರಂಡಿ ಸೇರಿದಂತೆ ಸಾರ್ವಜನಿಕ ಸ್ಥಳಗಳಾದ ಶಾಲೆ, ಆಸ್ಪತ್ರೆ, ಅಂಗನವಾಡಿ, ಸಮುದಾಯ ಭವನ ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದರು.
ಶಿಕ್ಷಕ ಎಸ್ ಆರ್ ಚಾಳೇಕರ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಹರಿಜನ ಕೇರಿಗಳಿಗೆ ಭೇಟಿ ನೀಡಿ ತಾವೇ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ, ಅಲ್ಲಿನ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸುತ್ತಾ, ನೆರೆಹೊರೆಯವರಿಗೂ ಸ್ವಚ್ಛತೆಯ ಬಗ್ಗೆ ತಿಳಿಸಿಕೊಡುತ್ತಿದ್ದರು. ಅವರ ಹಾದಿಯಲ್ಲೇ ನಾವು ಸಾಗಬೇಕು ಎಂದು ತಿಳಿಸಿದರು.
ಯುವ ಮುಖಂಡ ಪರಶುರಾಮ ಹೊಸಮನಿ, ಗ್ರಾಪಂ ಸದಸ್ಯರಾದ ಸುದರ್ಶನ ಬೇನೂರ, ಉಮೇಶ ಹಲಸಂಗಿ ಹಾಗೂ ಸಿಬ್ಬಂದಿಗಳಾದ ಅಕ್ಬರ ಕೊರಬು, ಶ್ರೀಧರ ಬಾಳಿ, ಮುಖ್ಯ ಶಿಕ್ಷಕರಾದ ಅನಿಲ ಪತಂಗಿ,ವ್ಹಿ ವೈ ಪತ್ತಾರ,ಎ ಸಿ ಹುಣಸಗಿ ಸೇರಿದಂತೆ ಶಾಲಾ ಶಿಕ್ಷಕರು,ಮಕ್ಕಳು, ಗ್ರಾಮಸ್ಥರು ಭಾಗವಹಿಸಿದ್ದರು.