ಕೆಎಸ್‌ಆರ್‌ಟಿಸಿಗೆ ಪ್ರತಿಷ್ಠಿತ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ
ಬೆಂಗಳೂರು.ಸೆ.೨೨-ನಿಗಮದ ನೌಕರರಿಗೆ ಹೃದಯ ಸಂಬಂಧಿ ಆರೋಗ್ಯ ತಪಾಸಣೆ ಮತ್ತು ಮುಂಜಾಗ್ರತೆ ವಹಿಸುವ ಉಪಕ್ರಮಗಳಿಗಾಗಿ “ಸಾರಿಗೆ ಸಂಜೀವಿನಿ” ಎಂಬ ಯೋಜನೆ ಜಾರಿಗೆ ತರಲಾಗಿದ್ದು, ಸದರಿ ಉಪಕ್ರಮಕ್ಕಾಗಿ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ದೆಹಲಿ ಮೂಲದ ಸ್ಕಾಚ್ ಸಂಸ್ಥೆಯು ಸ್ವತಂತ್ರ ವಿಚಾರ ತಜ್ಞ ವೇದಿಕಾ ಸಂಸ್ಥೆಯಾಗಿದ್ದು ೧೯೯೭ರಲ್ಲಿ ಸ್ಥಾಪಿತವಾಗಿರುತ್ತದೆ. ಈ ಸಂಸ್ಥೆಯು ೨೦೦೩ ರಿಂದ ಸ್ಕಾಚ್ ಪ್ರಶಸ್ತಿಯನ್ನು ವಿವಿಧ ಸಂಸ್ಥೆಗಳು ಸಾಧಿಸಿರುವ ಉತ್ತಮ ಆಡಳಿತ ನಿರ್ವಹಣೆ, ಹಣಕಾಸು, ತಾಂತ್ರಿಕತೆ ಅಳವಡಿಕೆ ಹಾಗೂ ಆಂತರಿಕ ಬೆಳವಣಿಗೆಗಾಗಿ ನೀಡುತ್ತಾ ಬಂದಿದೆ. ಸ್ಕಾಚ್ ಸಂಸ್ಥೆಯು ತನ್ನ ಅತ್ಯುನ್ನತ ಪ್ರಶಸ್ತಿಗಳನ್ನು ಸಂಸ್ಥೆಗಳು ಮಾಡಿರುವ ಅತಿ ಉತ್ತಮ ಸಾಧನೆ ಹಾಗೂ ಅವುಗಳಿಂದ ಉಂಟಾಗಿರುವ ಪರಿಣಾಮಗಳನ್ನು ಆಧರಿಸಿ ಆಯ್ಕೆ ಮಾಡಿ ನೀಡುತ್ತದೆ.
ಇಂದು, ಸ್ಕಾಚ್ ಸಂಸ್ಥೆಯು ದೆಹಲಿಯ, ಸಿಲ್ವರ್ ಓಕ್ ಹಾಲ್, ಇಂಡಿಯಾ ಹ್ಯಾಬಿಟೇಟ್ಸೆಂಟರ್ ನಲ್ಲಿ ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಮೀರ್ ಕೊಚ್ಚರ್, ಅಧ್ಯಕ್ಷರು, ಸ್ಕಾಚ್ ಗ್ರೂಪ್, ಡಾ.ಗುರುಶರಣ್ ಧನ್ಜಾಲ್ , ಉಪಾಧ್ಯಕ್ಷರು ಸ್ಕಾಚ್ ಗ್ರೂಪ್ ಪ್ರಶಸ್ತಿಯನ್ನು ಮುಖ್ಯ ಕಾನೂನು ಅಧಿಕಾರಿ ವೆಂಕಟೇಶ ಟಿ. ಮತ್ತು ಕೆ.ಎಂ. ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಅಶ್ರಫ್ ಅವರಿಗೆ ನೀಡಿದೆ.