ರೈಲ್ವೆ ಕ್ರಾಸಿಂಗ್‌ಗೆ ಮುಕ್ತಿ ಶೋಭಾ ಸಂಕಲ್ಪ
ಕೆಂಗೇರಿ, ಸೆ.೨೨- ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ದೇಶದೆಲ್ಲೆಡೆ ಇರುವ ರೈಲ್ವೆ ಕ್ರಾಸಿಂಗ್‌ಗೇಟ್ ಗಳನ್ನ ಮುಚ್ಚಿ ವಾಹನಗಳು ಹಾಗೂ ವಾಹನ ಸವಾರರು ಸುರಕ್ಷಿತವಾಗಿ ಪ್ರಯಾಣಿಸಬೇಕೆಂಬ ದೂರು ದೃಷ್ಟಿ ಕನಸನ್ನು ನನಸು ಮಾಡಲು ದೃಢಸಂಕಲ್ಪ ಮಾಡಲಾಗಿದೆ ಎಂದು ಬೆಂಗಳೂರು ಉತ್ತರ ಲೋಕಸಭಾ ಸದಸ್ಯೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಯಶವಂತಪುರ ವಿಧಾನಸಭಾ ಕ್ಷೇತ್ರದ ದುಬಾಸಿಪಾಳ್ಯ, ಗೇರುಪಾಳ್ಯ ಬ್ರಾಕೆಟ್ (ರಾಮೋಹಳ್ಳಿ ಗೇಟ್) ಹಾಗೂ ಚಳ್ಳೆಘಟ್ಟ ರೈಲ್ವೆ ಗೇಟ್ ಲೆವೆಲ್ ಕ್ರಾಸಿಂಗ್ ಪ್ರದೇಶಗಳಿಗೆ ವಸ್ತುಸ್ಥಿತಿ ಪರಿಶೀಲನೆಗಾಗಿ ರೈಲ್ವೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಮಾತನಾಡಿದ ಅವರು ಲೆವಿಲ್ ಕ್ರಾಸಿಂಗ್ ರೈಲ್ವೆ ಗೇಟ್ ನಿಂದಾಗಿ ವಾಹನ ಸವಾರರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿ ನಾಗರಿಕರು ತೊಂದರೆ ಎದುರಿಸುವಂತಾಗಿದೆ ಎಂದು ತಿಳಿಸಿದರು. ರೈಲ್ವೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಸಮನ್ವತೆಯನ್ನು ಸಾಧಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗ ಬೇಕೆಂದು ಸೂಚಿಸಿದರು. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕೂಲಂಕುಶವಾಗಿ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಬೇಕೆಂದರು. ಕೈಗೊಂಡಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವ ಮೂಲಕ ನಾಗರಿಕರ ಸುಗಮ ಸಂಚಾರ ವ್ಯವಸ್ಥೆಗೆ ಅನುಕೂಲ ಕಲ್ಪಿಸಬೇಕೆಂದರು.
ಬೆಂಗಳೂರು ಉತ್ತರ ಜಿಲ್ಲಾ ಭಾಜಪ ಹಿಂದುಳಿವರ್ಗ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆರ್ ಪಿ ಪ್ರಕಾಶ್ ಮಾತನಾಡಿ ಬೆಂಗಳೂರು ನಗರ ಕ್ಕೆ ಆಗಮಿಸುವ ಪ್ರವಾಸಿಗರು ವಿಶ್ವ ವಿಖ್ಯಾತ ದೊಡ್ಡ ಆಲದ ಮರಕ್ಕೆ ಭೇಟಿ ನೀಡಲು ರಾಮೋಹಳ್ಳಿ ರೈಲ್ವೆ ಗೇಟ್ ಮೂಲಕವೇ ಸಾಗಬೇಕಾದ ಪರಿಸ್ಥಿತಿ ಇರುವುದರಿಂದ ಲೆವೆಲ್ ಕ್ರಾಸಿಂಗ್ ರೈಲ್ವೆ ಗೇಟ್ ನಿಂದಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ನಿತ್ಯ ಹತ್ತು ಸಾವಿರಕ್ಕೂ ಹೆಚ್ಚು ವಾಹನಗಳು ಇದೇ ಗೇಟ್ ಮೂಲಕ ಸರಕು ವಾಹನಗಳು, ಕಾರು, ಬಸ್ಸು ದ್ವಿಚಕ್ರವಾಹನ ಸಂಚಾರ ಮಾಡುವುದರಿಂದ ಬಹಳ ತೊಂದರೆ ಅನುಭವಿಸುತ್ತಿದ್ದಾರೆ, ಅಧಿಕಾರಿಗಳು ಶೀಘ್ರ ಅಂಡರ್ ಪಾಸ್ ಅಥವಾ ಮೇಲ್ ಸೇತುವೆ ನಿರ್ಮಾಣ ಮಾಡುವ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಬಿಬಿಎಂಪಿ ರಾಜರಾಜೇಶ್ವರಿ ನಗರ ಉಪವಲಯ ಜಂಟಿ ಆಯುಕ್ತ ಡಾ.ಅಜಯ್, ರೈಲ್ವೆ ಉನ್ನತ ಅಧಿಕಾರಿಗಳು, ಬಿಬಿಎಂಪಿ ಮಾಜಿ ಸದಸ್ಯ ರ.ಅಂಜನಪ್ಪ, ಗ್ರಾಮಾಂತರ ಮಂಡಲ ಭಾಜಪ ಅಧ್ಯಕ್ಷ ರಂಗರಾಜ್, ಹರೀಶ್, ಮುಖಂಡರಾದ ಸ್ಪಾಟ್ ನಾಗರಾಜ್ ಪಾಂಡು, ವೆಂಕಟೇಶ್, ವಾಜರಹಳ್ಳಿ ಶಶಿಕುಮಾರ್, ಎನ್. ಸಿ.ಕುಮಾರ್ ನಾಗದೇವನಹಳ್ಳಿ ಉಪಸ್ಥಿತರಿದ್ದರು.