ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸೋಮಣ್ಣ ಚಾಲನೆ
ಬೆಂಗಳೂರು.ಸೆ.೨೨-ಕೇಂದ್ರ ಸಚಿವರ ನಿವಾಸದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣರವರು ಚಾಲನೆ ನೀಡಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿ, ವಿಶ್ವದ ಅತಿಡೊಡ್ಡ ಸದಸ್ಯತ್ವ ಹೊಂದಿರುವ ಮತ್ತು ದೇಶ ಮೊದಲು ಎಂಬ ರಾಷ್ಟ್ರಭಕ್ತಿ ಸಾರಿದ ಪಕ್ಷ ಬಿಜೆಪಿ. ಬಿಜೆಪಿ ಪಕ್ಷದ ಕಾರ್ಯಕರ್ತ ಎಂದರೆ ಹೆಮ್ಮೆಪಡುವ ಸಂಗತಿಯಾಗಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ಮೂರನೇಯ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚನೆಯಾಗಿದೆ.ಯುವಕರು ಬಿಜೆಪಿ ಪಕ್ಷಕ್ಕೆ ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳಿ, ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬಿಜೆಪಿ ಪಕ್ಷದ ಜೊತೆಯಲ್ಲಿ ಹೆಜ್ಜೆ ಇಡಿ ಎಂದು ಮನವಿ ಮಾಡಿದರು.
ದೇಶದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಆಡಳಿತದಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಮತ್ತು ಕಾಯಕ ಸಿದ್ಧಾಂತದಲ್ಲಿ ಕೇಂದ್ರ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ವಿವರಿಸಿದರು.
ಇಂದು ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ಭಾರತ ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ.
ದೇಶದಲ್ಲಿ ಯುವ ಸಮುದಾಯದ ಸಂಖ್ಯೆ ಹೆಚ್ಚಿದೆ, ಯುವ ಸಮುದಾಯದ ಬುದ್ಧಿಶಕ್ತಿ, ಸಾಮ್ಯರ್ಥ್ಯ ದೇಶದ ಅಭಿವೃದ್ಧಿ ಬಳಕೆಯಾಗಬೇಕು ಅದ್ದರಿಂದ ಬಿಜೆಪಿ ಪಕ್ಷದ ಸದಸ್ಯರಾಗಿ ಅಭಿವೃದ್ದಿಯ ಜೊತೆಯಲ್ಲಿ ಸಾಗೋಣ ಎಂದು ಹೇಳಿದರು.
ಮಂಡಲ ಮಹಿಳಾ ಅಧ್ಯಕ್ಷೆ ರತ್ನಮ್ಮ, ಬಿಜೆಪಿ ಮುಖಂಡರುಗಳಾದ ಸಿ.ಎಂ.ರಾಜಪ್ಪ, ಶ್ರೀಧರ್, ಹೆಚ್.ರಮೇಶ್, ರಾಜ್ಯ ಬಿಜೆಪಿ ಯುವ ನಾಯಕ ಡಾ.ಅರುಣ್ ಸೋಮಣ್ಣ, ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥಗೌಡರು, ಮಾಜಿ ಮಹಾನಗರ ಪಾಲಿಕೆ ಸದಸ್ಯ ಮೋಹನ್ ಕುಮಾರ್ ಉಪಸ್ಥಿತರಿದ್ದರು.