ಖೋಟಾ ನೋಟು ಚಲಾಯಿಸಿದವನಿಗೆ 7 ವರ್ಷ ಶಿಕ್ಷೆ
ಕಲಬುರಗಿ,ಮೇ 4: ಚಿತ್ತಾಪುರ ಪಟ್ಟಣದ ಅಂಬೇಡ್ಕರ ಸರ್ಕಲ್‍ನಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪ ಸಾಬೀತಾದ್ದರಿಂದ ಆರೋಪಿಗೆ 4 ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯವು 7 ವರ್ಷ ಜೈಲುಶಿಕ್ಷೆ ವಿಧಿಸಿದೆ.
ಮಹಾರಾಷ್ಟ್ರದ ಸೊಲಾಪುರ ಜಿಲ್ಲೆ ಅಕ್ಕಲಕೋಟೆ ತಾಲೂಕಿನ ಶೇಗಾಂವ ಗ್ರಾಮದ ಸೆಕ್ಯೂರಿಟಿ ಗಾರ್ಡ ವೃತ್ತಿಯ ಅರವಿಂದ ಶಿವಪುತ್ರ ಚಾಬುಕಸ್ಟಾರ ( 35 ) ಶಿಕ್ಷೆಗೊಳಗಾದವ.
2016 ರ ಅಕ್ಟೋಬರ್ 5 ರಂದು ಚಿತ್ತಾಪುರ ಪಟ್ಟಣದ ಅಂಬೇಡ್ಕರ ಚೌಕ ಹತ್ತಿರ ಅರವಿಂದನು ಮಹಾರಾಷ್ಟ್ರದಿಂದ ತಂದ 1 ಸಾವಿರ ರೂ ಮುಖಬೆಲೆಯ ಒಟ್ಟು 39 ಖೋಟಾ ನೋಟುಗಳು ಇಟ್ಟುಕೊಂಡು ಅವುಗಳನ್ನು ಚಲಾವಣೆ ಮಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.ಸಿಪಿಐ ಶಂಕರಗೌಡ ಪಾಟೀಲ ಪ್ರಕರಣದ ತನಿಖೆ ಕೈಕೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 4 ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ಕಲಬುರಗಿ ಪೀಠಾಸನ ಸೇಡಂ ನ್ಯಾಯಾಲಯದ ನ್ಯಾಯಾಧೀಶ ಕೆ. ಕರಣ ಗುಜ್ಜಾರ ಅವರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ 4 ನೇ ಸರ್ಕಾರಿ ಅಭಿಯೋಜಕ ಕೆ ಆರ್ ನಾಗರಾಜ ಮಸ್ಕಿ ಅವರು ವಾದ ಮಂಡಿಸಿದ್ದರು.