ಕಾಂಗ್ರೆಸ್ ಅತ್ಯಧಿಕ ಸೀಟು ಗಳಿಸಿದರೆ ಖರ್ಗೆ ಪ್ರಧಾನಿ
ಕಲಬುರಗಿ,ಮೇ 4: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು ಹೆಚ್ಚು ಸೀಟು ಗಳಿಸಿದರೆ ಎಐಸಿಸಿ ಅಧ್ಯಕ್ಷ,371
(ಜೆ)ಕಲಂ ರೂವಾರಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಯಾಗುವ ಸಾಧ್ಯತೆ ಇದೆ ಸಚಿವ ಎಂ.ಬಿ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ವೀರಶೈವ ಕಲ್ಯಾಣಮಂಟಪದ ಹೊರಭಾಗದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಬೆಂಬಲಿತ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷವು ಬಸವಣ್ಣನವರ ಜಾತ್ಯತೀತ,ಸಮಾನತೆಯ ತತ್ವದ ಮೇಲೆ ನಿಂತಿದೆ.ಆದರೆ ಬಿಜೆಪಿ ಆರ್‍ಎಸ್‍ಎಸ್ ಮನುವಾದದ ಪರವಾಗಿದೆ.ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟದ್ದು, ಕಾಂಗ್ರೆಸ್ ಪಕ್ಷ.ವೀರಶೈವ ಲಿಂಗಾಯತ ಸಮಾಜದವರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಪ್ರಾಣ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ.ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಇದರಿಂದ ಈ ಭಾಗದ ಅಭಿವೃದ್ಧಿಯಾಗುತ್ತದೆ ಎಂದು ಮನವಿ ಮಾಡಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ,ಕೆಲವರು ಕೋಟನೂರ (ಡಿ) ಗ್ರಾಮದಲ್ಲಿ ನಡೆದ ಘಟನೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ.ಈಗಾಗಲೇ ಆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ.ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.ಲಿಂಗಾಯತ ಸಮುದಾಯದವರು ಭಾವುಕರಾಗದೇ ಈ ಬಾರಿ ಖರ್ಗೆ ಅವರ ಕೈ ಬಲಪಡಿಸಬೇಕು.ಕಾಂಗ್ರೆಸ್ ಬೆಂಬಲಿಸಬೇಕು ಎಂದು ಕೋರಿದರು.
ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ,ಲಿಂಗಾಯತ ಸಮುದಾಯ ಪಕ್ಷವೊಂದರ ಡಿಪಾಸಿಟ್ ಅಲ್ಲ ಎಂಬುದನ್ನು ನಾವುತೋರಿಸಬೇಕಿದೆ.ಕೋಟನೂರ ಘಟನೆಯನ್ನು ಖರ್ಗೆ ಕುಟುಂಬದೊಂದಿಗೆ ಜೋಡಿಸುವದು ಸರಿಯಲ್ಲ ಎಂದರು.ಸಿಎಂ ಸಲಹೆಗಾರ ಶಾಸಕ ಬಿ.ಆರ್ ಪಾಟೀಲ, ಶಾಸಕ ಎಂವೈ ಪಾಟೀಲ ಮಾತನಾಡಿದರು.ವೇದಿಕೆಯಲ್ಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ, ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್ ಡಿಬಿ ಅಧ್ಯಕ್ಷ ಡಾ,ಅಜಯಸಿಂಗ್,ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ,ವಿಶ್ವನಾಥ ಪಾಟೀಲ ಹೆಬ್ಬಾಳ,ಶರಣಕುಮಾರ ಮೋದಿ,ಡಾ.ಭೀಮಾಶಂಕರ ಬಿಲಗುಂದಿ,ಡಾ.ಎಸ್.ಬಿ ಕಾಮರೆಡ್ಡಿ,ಗುಪ್ತಲಿಂಗ ಪಾಟೀಲ,ರಾಜಶೇಖರ ಸೀರಿ,ಡಾ.ಕಿರಣ ದೇಶಮುಖ, ಸಂತೋಷ ಪಾಟೀಲ ದಣ್ಣೂರ,ಪ್ರವೀಣ ಪಾಟೀಲ ಹರವಾಳ,ಈರಣ್ಣ ಝಳಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.