ಹಾದಿ ತಪ್ಪಿಸುತ್ತಿರುವ ಬಿಜೆಪಿ ದೂರವಿಡಿ: ಭಂಡಾರಿ ಕರೆ
ಕಲಬುರಗಿ,ಮೇ 4:ಕಾಂಗ್ರೆಸ್ ಪಕ್ಷ ಜನರ ಬದುಕಿಗೆ ಬೇಕಿರುವ ಅಂಶಗಳ ಅನುಷ್ಠಾನಕ್ಕೆ ಒತ್ತು ನೀಡುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ಭಾವನಾತ್ಮಕ ವಿಷಯಗಳನ್ನು ಮುಂದಿಡುತ್ತಾ ಜನರ ಹಾದಿ ತಪ್ಪಿಸುತ್ತಿದೆ. ಹಾಗಾಗಿ, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ದೂರ ಇಡಬೇಕೆಂದುಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಕರೆ ನೀಡಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಗ್ಯಾಸ್ ಸಿಲೆಂಡರ್, ಪೆಟ್ರೋಲ್ ದರದಲ್ಲಿ ದಿನೇದಿನೆ ಹೆಚ್ಚಳ ಆಗುತ್ತಿದ್ದರೂ ಸುಳ್ಳು ಭರವಸೆಗಳನ್ನು ನೀಡುತ್ತಾ ಕೇಂದ್ರ ಸರಕಾರ ಇಂದಿಗೂ ಬೆಲೆ ಏರಿಕೆ ಕುರಿತು ಸ್ಪಷ್ಟನೆ ನೀಡುತ್ತಿಲ್ಲ ಎಂದು ಟೀಕಿಸಿದರು.ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಪುಲ್ವಾಮಾ ದಾಳಿಯನ್ನು ಮುಂದಿಟ್ಟುಕೊಂಡು ಬೆಲೆ ಏರಿಕೆ ಹಿನ್ನೆಲೆಗೆ ಸರಿಯುವಂತೆ ಮಾಡಿ ಬಿಜೆಪಿ ಪುನಃ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿತ್ತು. ದುರಂತವೆಂದರೆ, ಇಂದಿಗೂ ಗ್ಯಾಸ್ ಸಿಲೆಂಡರ್, ರಸಗೊಬ್ಬರದ ಬೆಲೆ ಕಡಿಮೆಯಾಗಿಲ್ಲ. ಬೆಲೆ ಏರಿಕೆಗೆ ಕಡಿವಾಣ ಬಿದ್ದಿಲ್ಲ. ಆದಾಗ್ಯೂ ಈ ಬಾರಿಯ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗಳಿಸಲು ಮುಸ್ಲಿಮರ ವಿರುದ್ಧ, ಹೆಣ್ಣು ಮಕ್ಕಳ ಮಾಂಗಲ್ಯದ ಕುರಿತು ಭಾವನಾತ್ಮಕವಾಗಿ ಪ್ರಸ್ತಾಪಿಸುತ್ತಾ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದಾರೆ. ಇದರಿಂದ ಈ ದೇಶದ ಪ್ರಧಾನ ಮಂತ್ರಿ ದಿವಾಳಿಯಾಗಿರುವುದು ಸಾಬೀತಾಗುವಂತಿದೆ ಎಂದರು.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎನ್ನುತ್ತಾ ಮಣಿಪುರದಲ್ಲಿ ನಡೆಯುತ್ತಿರುವ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಖಂಡಿಸುತ್ತಿಲ್ಲ. ಮೇಲಾಗಿ ಆ ರಾಜ್ಯಕ್ಕೆ ಮೋದಿ ಭೇಟಿ ನೀಡುತ್ತಿಲ್ಲ. ಮತ್ತೊಂದೆಡೆ, ರಾಜಕೀಯ ಲಾಭಕ್ಕಾಗಿ ಈವರೆಗೆ ಕರ್ನಾಟಕ ರಾಜ್ಯಕ್ಕೆ 45 ಭಾರಿ ಭೇಟಿ ನೀಡಿದ್ದಾರೆ. ಇಷ್ಟಾದರೂ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯನ್ನು ರಾಜ್ಯದ ಜನರು ತಿರಸ್ಕರಿಸಿದ್ದಾರೆ ಎಂದರು.ರಾಜ್ಯ ಸರಕಾರದ ಗ್ಯಾರಂಟಿಗಳಿಗೆ ವಾರಂಟಿ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದರು. ಇಷ್ಟಾದರೂ ರಾಜ್ಯದಲ್ಲಿ ಮತದಾರರು 135 ಕ್ಷೇತ್ರಗಳು ಹಾಗೂ 18 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಮತ ಚಲಾಯಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಭಂಡಾರಿ ವಿಶ್ವಾಸ ವ್ಯಕ್ತಪಡಿಸಿದರು.ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅಭಿವೃದ್ಧಿ ಪರವಾದ ವ್ಯಕ್ತಿಯಾಗಿದ್ದು, ಅವರಿಗೆ ಈ ಬಾರಿ ಮತ ನೀಡಬೇಕೆಂದು ಆಗ್ರಹಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಸೋಮಶೇಖರ್ ಹಿರೇಮಠ, ಜಿಲ್ಲಾ ಪಂಚಾಯತಿ ಮಾಜಿ ಪ್ರತಿಪಕ್ಷ ನಾಯಕ ಶಿವಾನಂದ ಪಾಟೀಲ್ ಮರತೂರ ಇದ್ದರು.