ಇವನಮ್ಮವ ಎಂದು ಇಂಬಿಟ್ಟುಕೊಳ್ಳುವ ತತ್ವವೇ ಬಸವ ತತ್ವ : ಚನ್ನಬಸವಾನಂದ ಶ್ರೀ
ಬೀದರ್: ಮೇ.4:ವಿಶ್ವಗುರು ಬಸವೇಶ್ವರರು ಹೇಳಿದಂತೆ ಇವನಮ್ಮವ ಇವನಮ್ಮವ ಎಂದು ಸರ್ವಜನಾಂಗದವರನ್ನು ಹೃದಯದಲ್ಲಿ ಇಂಬಿಟ್ಟುಕೊಳ್ಳುವ ತತ್ವವೇ ಬಸವ ತತ್ವ ಎಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
ನಗರದ ಚಿಕ್ಕಪೇಟ ಬಸವಾಶ್ರಮ ನಿವೇಶನದಲ್ಲಿ ವಿಶ್ವಧರ್ಮ ಪ್ರವಚನ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಜೈನ ಬೌದ್ಧ ಕ್ರೈಸ್ತ ಸಿಖ್ ಮತ್ತು ಇಸ್ಲಾಂ ಧರ್ಮದಂತೆ ಲಿಂಗಾಯತ ಒಂದು ಸ್ವತಂತ್ರ ಧರ್ಮ. ಅಲ್ಲಾಹ ಯಹೋವ ಸುಪ್ರಿಂ ಗಾಡ್ ನಂತೆ ಇಷ್ಟಲಿಂಗ ನಮ್ಮ ಧರ್ಮದ ಕುರುಹಾಗಿದೆ. ಪ್ರತಿಯೊಬ್ಬರೂ ದೀಕ್ಷೆ ಪಡೆದು ಲಿಂಗ ಧರಿಸಬೇಕು. ಸಂಸ್ಕಾರವಂತರಾಗಿ ಬದುಕಬೇಕೆಂದು ಕರೆ ನೀಡಿದರು. ಪ್ರವಚನ ಆಲಿಸುವುದರಿಂದ ಚಿತ್ತ ಮನ ಶರೀರ ಶುದ್ಧಿಯಾಗುತ್ತದೆ. ಬಸವೇಶ್ವರರ ಸಪ್ತ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆಚರಿಸಬೇಕೆಂದು ಶ್ರೀಗಳು ತಿಳಿಸಿದರು.
ಯುವ ಧುರೀಣರಾದ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ ಚಿಕ್ಕಪೇಟದಲ್ಲಿ ಒಂದು ಭಕ್ತಿಯ ವಾತಾವರಣ ನಿರ್ಮಾಣವಾಗಿದೆ. ಪೂಜ್ಯ ಚನ್ನಬಸವಾನಂದ ಶ್ರೀಗಳು ಜನಬದುಕಲಿ ಜಗ ಬದುಕಲಿ ಎಂದು ಒಂದು ಧಾರ್ಮಿಕ ಕೇಂದ್ರ ನಿರ್ಮಾಣ ಮಾಡಿ ಮುಂದಿನ ಪೀಳಿಗೆಗೆ ಸನ್ಮಾರ್ಗದಲ್ಲಿ ನಡೆಸುವ ಗುರಿ ಹೊಂದಿದ್ದಾರೆ. ಅವರ ಕಾರ್ಯಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರಲ್ಲದೆ ಮರಕಲ ಪಂಚಾಯತ್ ಪದಾಧಿಕಾರಿಗಳಿಗೆ ಮೂಲಭೂತ ಸೌಕರ್ಯಗಳ ಒದಗಿಸಿಕೊಡುವಂತೆ ಕೋರಿದರು.
ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಮಾತನಾಡಿ ಕೊರಳಲ್ಲಿ ಪರಮಾತ್ಮನ ಕುರುಹು ಲಿಂಗ ಧರಿಸಬೇಕು. ಲಿಂಗಾಯತ ಇದು ವಿಶ್ವಧರ್ಮವಾಗಿದೆ. ಇಲ್ಲಿ ಜಾತಿ ವರ್ಣ ವರ್ಗರಹಿತವಾಗಿ ಅಪ್ಪಿಕೊಳ್ಳಲಾಗುತ್ತದೆ ಎಂದರು.
ನೇತೃತ್ವವನ್ನು ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಮಾತೆ ಸತ್ಯಾದೇವಿ ವಹಿಸಿದ್ದರು. ಇದೇ ವೇಳೆ ನೂತನ ರಾಷ್ಟ್ರೀಯ ಬಸವ ದಳ ಚಿಕ್ಕಪೇಟ ಶಾಖೆ ಉದ್ಘಾಟನೆ ಮಾಡಲಾಯಿತು. ವೇದಿಕೆ ಮೇಲೆ ಅಧ್ಯಕ್ಷತೆ ಅಶೋಕ ಪಾಟೀಲ ವಹಿಸಿದ್ದರು. ಮರಕಲ ಗ್ರಾ.ಪಂ. ಅಧ್ಯಕ್ಷೆ ಈಶ್ವರಮ್ಮ ಬಿ.ಓಂಕಾರೆ, ಉಪಾಧ್ಯಕ್ಷ ವೈಜಿನಾಥ ಕಾಂಬಳೆ, ಮಾಳಪ್ಪ ಅಡಸಾರೆ, ಮೆಹಬೂಬ್ ಬಾಬುಮಿಯಾ, ಶಿವರಾಜ ಪಾಟೀಲ ಅತಿವಾಳ, ನಾಗಶೆಟ್ಟಿ ರಾಂಪೂರೆ, ಕಲ್ಲಪ್ಪ ದೇಶಮುಖ, ಬಸವಂತರಾವ ಬಿರಾದಾರ, ಶಿವಕುಮಾರ ಪಾರಾ, ಸಿದ್ದಪ್ಪ ಜೀರ್ಗೆ, ಗಣಪತಿ ಬಿರಾದಾರ, ಬಸವರಾಜ ಪಾಟೀಲ ಚಿಕ್ಕಪೇಟ, ಸತೀಶ ಪಾಟೀಲ, ಬಸಯ್ಯ ಸ್ವಾಮಿ ಜಹಿರಾಬಾದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಅಡಿವೆಪ್ಪ ಪಟ್ನೆ ಬಹುಮಾನ ವಿತರಿಸಿದರು. ಮಕ್ಕಳ ವಚನ ನೃತ್ಯ ಸಭೀಕರ ಗಮನ ಸೆಳೆಯಿತು.