ಅಸ್ಥಮಾದ ನಿರ್ಲಕ್ಷ್ಯ ಬೇಡ, ಮುಂಜಾಗೃತೆ ವಹಿಸಿ
ಕಲಬುರಗಿ:ಮೇ.4: ವ್ಯಕ್ತಿಗೆ ಉಂಟಾಗುವ ಸಾಮಾನ್ಯ ಕಾಯಿಲೆಗಳಲ್ಲಿ ಅಸ್ಥಮಾ ಒಂದಾಗಿದ್ದು, ಧೂಳು, ಮಾಲಿನ್ಯ, ಅನಾರೋಗ್ಯಕರ ಜೀವನಶೈಲಿಯಿಂದ ಉಂಟಾಗುತ್ತಿದ್ದು, ಅದರ ಬಗ್ಗೆ ನಿರ್ಲಕ್ಷ್ಯವಹಿಸದೆ ಮುಂಜಾಗೃತೆ ವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು.
ನಗರದ ಶೇಖರೋಜಾದಲ್ಲಿರುವ ‘ಶಹಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ’್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಶನಿವಾರ ಜರುಗಿದ ‘ವಿಶ್ವ ಅಸ್ಥಮಾ ದಿನಾಚರಣೆ’ಯನ್ನು ಹಿರಿಯರೊಬ್ಬರ ಉಸಿರಾಟ ಪರೀಕ್ಷಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಸ್ಥಮಾ ಶ್ವಾಶಕೋಶಕ್ಕೆ ತೊಂದರೆಯನ್ನು ಉಂಟುಮಾಡುತ್ತದೆ. ಉಬ್ಬಸ, ದಮ್ಮು, ಕೆಮ್ಮು ಇದರ ಲಕ್ಷಣಗಳಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಇದು ವಿಶೇಷವಾಗಿ ಮಹಿಳೆಯರು, ಮಕ್ಕಳಿಗೆ ಹೆಚ್ಚು ತೊಂದರೆಯನ್ನು ಉಂಟುಮಾಡುತ್ತದೆ. ಗರ್ಭಿಣಿಯರು ವಿಶೇಷವಾದ ಕಾಳಜಿ ವಹಿಸಬೇಕು. ಆರೋಗ್ಯಕರ ಜೀವನಶೈಲಿ, ಹೆಚು ಕೊಬ್ಬುಯುಕ್ತ ಆಹಾರ ಸೇವನೆ ಮಾಡದಿರುವುದು, ಯೋಗ, ಪ್ರೋಟಿನಯುಕ್ತ ಆಹಾರ ಹೆಚ್ಚಿನ ಸೇವನೆ, ಋತಮಾನಕ್ಕೆ ತಕ್ಕಂತೆ ಆಹಾರದ ಸೇವನೆ, ಆಗಾಗ್ಗೆ ಬಿಸಿನೀರು ಸೇವನೆಯಂತಹ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಅಸ್ಥಮಾ ಬರದಂತೆ ತಡೆಗಟ್ಟಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ನಾಗೇಶ್ವರಿ ಮುಗಳಿವಾಡಿ, ಗಂಗಾಜ್ಯೋತಿ ಗಂಜಿ, ಮಂಗಲಾ ಚಂದಾಪುರೆ, ಸಂಗಮ್ಮ ಅತನೂರ, ರೇಶ್ಮಾ ನಕ್ಕುಂದಿ, ಗುರುರಾಜ ಕೈನೂರ್, ಜಗನಾಥ ಗುತ್ತೇದಾರ, ನಾಗಮ್ಮ ಚಿಂಚೋಳಿ, ಸಿದ್ರಾಮ್ ಸೇರಿದಂತೆ ಇನ್ನಿತರರಿದ್ದರು.