ನಿವೃತ್ತ ಸೈನಿಕರಿಗೆ ಅದ್ದೂರಿ ಸ್ವಾಗತ
ಕಲಬುರಗಿ:ಮೇ.4:ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂಬ ಕವಿವಾಣಿಯಲ್ಲಿ ಒಬ್ಬ ಸಾಧಕನ ಧೀರೋದಾತ್ತ ನಡಿಗೆಯ ಉಲ್ಲೇಖವಿದೆ. ಸಾಧಕನಿಗೆ ಬದುಕಿನಲ್ಲಿ ಅನೇಕ ಕಷ್ಟಗಳು ಎದುರಾಗುತ್ತವೆ. ಸಮಸ್ಯೆಗಳು ಕಂಗೆಡಿಸುವ ಪ್ರಯತ್ನ ಮಾಡುತ್ತವೆ. ಆದರೂ ಇದಾವುದಕ್ಕೂ ಎದೆಗುಂದದೆ ತನ್ನ ಗುರಿ ಸಾಧನೆಗಾಗಿ ಮುನ್ನಡೆಯುವ ಸಾಧಕ ತನ್ನ ಗುರಿಯನ್ನು ನಿಶ್ಚಿತವಾಗಿ ಮುಟ್ಟುತ್ತಾನೆ. ಅಂಥ ಅಪರೂಪದ ಸಾಧಕ ನಮ್ಮ ಹೆಮ್ಮೆಯ ಸೇನಾನಿ ಧಾರಾಸಿಂಗ್ ರಾಠೋಡ್.
ಕಲಬುರಗಿ ಜಿಲ್ಲೆಯ ನೂತನ ಕಮಲಾಪುರ ತಾಲೂಕಿನ ದೇವಲು ನಾಯಕ ತಾಂಡಾದ ಬಡ ರೈತ ಕುಟುಂಬದ ಹೇಮಜಿ ರಾಠೋಡ್ ಮತ್ತು ಮುಕ್ತಾಬಾಯಿ ರಾಠೋಡ್ ದಂಪತಿಗಳ ಉದರದಲ್ಲಿ 25-04-1982 ರಂದು ಜನ್ಮ ತಾಳಿದ ಧಾರಾಸಿಂಗ್ ರಾಠೋಡ್ ಅವರು ಕಿತ್ತು ತಿನ್ನುವ ಬಡತನದಲ್ಲಿಯೇ ಬಿಕಾಂ ಪದವಿ ಪಡೆದು, ದೇಶ ಸೇವೆಯ ಮಹಾನ್ ಯಜ್ಞದಲ್ಲಿ ತಯ್ಯಾರಿ ನಡೆಸಿ ಅಂತಿಮವಾಗಿ 13-04-2002 ರಲ್ಲಿ ಭಾರತೀಯ ಆರ್ಮಿ ಸಿಗ್ನಲ್ಸ್ ರೆಜಿಮೆಂಟ್ ಗೆ ಆಯ್ಕೆಯಾಗಿ 16 ವರ್ಷ ಜನರಲ್ ಡ್ಯೂಟಿ, 6 ವರ್ಷ ಹವಾಲ್ದಾರ್ ಆಗಿ ಒಟ್ಟು 22 ವರ್ಷಗಳ ಕಾಲ ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಸೇವೆ ಸಲ್ಲಿಸಿ ಇದೇ ಏಪ್ರಿಲ್ ತಿಂಗಳ 30 ರಂದು ಸೇನೆಯಿಂದ ನಿವೃತ್ತಿಯಾಗಿ ಹುಟ್ಟೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಸಮಸ್ತ ರಾಠೋಡ್ ಪರಿವಾರ ಮತ್ತು ತಾಂಡಾ ನಿವಾಸಿಗಳು ಹೃದಯಸ್ಪರ್ಶಿ ಸ್ವಾಗತ ಕೋರಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಧಾರಾಸಿಂಗ್ ರಾಠೋಡ್ ಅವರು, ವಿದ್ಯಾರ್ಥಿಗಳು ದೈನಂದಿನ ಬದುಕಿನಲ್ಲಿ ನಾಯಕತ್ವ, ಧೈರ್ಯ, ವೃತ್ತಿಪರ ಜ್ಞಾನ, ನಿಷ್ಠೆ, ಸ್ವಯಂ ಶಿಸ್ತು ಮತ್ತು ಆತ್ಮ ವಿಶ್ವಾಸದೊಂದಿಗೆ ಸಂಹವನ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಭವಿಷ್ಯದ ನಾಯಕರಾಗಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಹೀರಾಲಾಲ್ ರಾಠೋಡ್, ಧನಸಿಂಗ್ ಪವಾರ್, ಶಿವರಾಮ ರಾಠೋಡ್, ಅಶೋಕ ರಾಠೋಡ್, ಬಾಲ ವಿಕಾಸ ಸಂಸ್ಥೆಯ ಯೋಜನಾ ಸಂಯೋಜಕ ಲಾಲಸಿಂಗ್ ರಾಠೋಡ್ ಮುಂತಾದವರು ಉಪಸ್ಥಿತರಿದ್ದರು.