ಬಿಜೆಪಿ ಗೆ 40 ಸಾವಿರ ಮತಗಳ ಲೀಡ್ ಸಿಗುವ ವಿಶ್ವಾಸ  – ರಾಜ್ಯಾಧ್ಯಕ್ಷ ಬಂಗಾರು ಹನುಮಂತು.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.4 : –  ದೇಶ ಹಾಗೂ ರಾಜ್ಯದಲ್ಲಿ ಮೋದಿ ಅಲೆ ಇದ್ದು, ಅವರ ಪಾರದರ್ಶಕ ಆಡಳಿತ ಜನರ ಮೆಚ್ಚುಗೆಗೆ ಕಾರಣವಾಗಿದೆ ಅಲ್ಲದೆ ಬಳ್ಳಾರಿಯಿಂದ ಬಿಜೆಪಿ ಲೋಕಸಭಾ  ಅಭ್ಯರ್ಥಿ ಶ್ರೀರಾಮುಲು ಗೆಲುವಿಗೆ ಕೂಡ್ಲಿಗಿ ಕ್ಷೇತ್ರದಿಂದ 40ಸಾವಿರ ಮತಗಳ ಲೀಡ್ ಸಿಗುವ ವಿಶ್ವಾಸವಿದೆ  ಎಂದು ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಹೇಳಿದರು.
ಪಟ್ಟಣದ ಅವರ ನಿವಾಸದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ  ಕಳೆದ ಹತ್ತು ವರ್ಷಗಳಲ್ಲಿ ರಾಷ್ಟ್ರದ ಭದ್ರತೆ ಸೇರಿದಂತೆ ಈ ದೇಶದ 140 ಕೋಟಿ ಜನರ ರಕ್ಷಣೆಗೆ ಅಭೂತಪೂರ್ವ ಕಾರ್ಯಗಳನ್ನು ಮಾಡಿ ಮೋದಿ ಜನರ ಮನಸ್ಸನ್ನು ಗೆದ್ದಿದ್ದಾರೆ, ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಪಾರದರ್ಶಕ ಸರ್ಕಾರ ಮತ್ತೊಮ್ಮೆ ಮೋದಿ ಎನ್ನುವಂತಾಗಿದೆ.ಆರ್ಟಿಕಲ್ 370 ನೇ ವಿಧಿಯನ್ನು ತೆಗೆದು ಕಾಶ್ಮೀರದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದು ಮೋದಿಯವರ ಗಟ್ಟಿತನದ ಸಂಕೇತವಾಗಿದೆ‌. ಭಾರತದ ಅಸ್ಮಿತೆಯ ವಿಷಯದಲ್ಲಿ ಒಂದಿಚೂ ಹಿಂದೆ ಸರಿಯದ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯ ವೈಖರಿ ಜನ ಗಮನಿಸಿದ್ದಾರೆ. ಪುಲ್ವಾಮ ದಾಳಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಶತ್ರು ರಾಷ್ಟ್ರಕ್ಕೆ ಎಚ್ಚರಿಕೆ ನೀಡಿದ್ದು, ಈ ದೇಶದ ಯುವಕ,ಯುವತಿಯರು ಗಮನಿಸಿ ಮೋದಿ ಆಡಳಿತ ವೈಖರಿ ಮೆಚ್ಚಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗ ದೇಶಕ್ಕೆ ವ್ಯಾಪಿಸಿದಾಗ ಇಡೀ ವಿಶ್ವವೇ ಭಾರತದ ಕಥೆ ಮುಗಿಯುತು ಎಂದಾಗ, ಇಡೀ ದೇಶದ ಜನತೆಗೆ ಭರವಸೆ ತುಂಬಿ, ವ್ಯಾಕ್ಸಿನ್ ಕಂಡು ಹಿಡಿದು, ಉಚಿತವಾಗಿ ವ್ಯಾಕ್ಸಿನ್ ಹಾಕಿಸಿ ದೇಶದ ಜನರ ಪ್ರಾಣ ಉಳಿಸಿದ್ದು ಇತಿಹಾಸ ಎಂದ ಅವರು ಸುಮಾರು 500 ವರ್ಷಗಳಿಂದ ನೆನಗುದಿಗೆ ಬಿದ್ದ ಹಿಂದುಗಳ ಅಸ್ಮಿತೆ ಪ್ರಭು ಶ್ರೀರಾಮ ಮಂದಿರ ನಿರ್ಮಾಣ ಮಾಡಲು ಬಿಜೆಪಿ ಸರ್ಕಾರವೇ ಬರಬೇಕಾಯಿತು, ಮೋದಿಯವರ ಅಚಲ ನಿರ್ಧಾರದಂತೆ ಹಿಂದುಗಳ ಆರಾಧ್ಯದೈವ ಶ್ರೀರಾಮ ಮಂದಿರ ಲೋಕಾರ್ಪಣೆಗೊಂಡಿತು. ಕಾಶಿ,ಮಥುರ ಮಂದಿರಗಳು ಕೂಡ ಮುಂಬರುವ ದಿನಗಳಲ್ಲಿ ಮೋದಿಯವರ ಇಚ್ಚೆಯಂತೆ ಅಭಿವೃದ್ಧಿಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಲಿತ ವಿರೋಧಿ ಬಿಜೆಪಿ ಪಕ್ಷ ಎಂದು ಆರೋಪ ಮಾಡುವ ಕಾಂಗ್ರೆಸಿಗರು ದಲಿತ ವ್ಯಕ್ತಿ ರಮಾನಾಥ್ ಕೋವಿಂದ್ ರಾಷ್ಟ್ರಪತಿ ಮಾಡಿದ್ದು ಬಿಜೆಪಿ ಸರ್ಕಾರ, ಬುಡಕಟ್ಟು ಜನಾಂಗದ ಮಹಿಳೆ ದ್ರೌಪದಿ ಮುರ್ಮು ರಾಷ್ಟ್ರಪತಿ ಹುದ್ದೆಗೆ ಆಯ್ಕೆಮಾಡಿದ್ದು ಬಿಜೆಪಿ ಎನ್ನುವುದು ಜನರಿಗೆ ಗೊತ್ತಿದೆ ಎಂದರು. ಪ್ರಧಾನಿ ಮೋದಿಯವರು ಅಯೋಧ್ಯೆಯಲ್ಲಿ ಭವ್ಯವಾಗಿ ರಾಮ ಮಂದಿರ ನಿರ್ಮಾಣ ಮಾಡಿ, ರಾಮಾಯಣ ಬರೆದ ವಾಲ್ಮೀಕಿ ಮಹರ್ಷಿಗಳ ಸ್ಮರಣೆಗಾಗಿ ಅಯೋಧ್ಯೆಯಲ್ಲಿನ ವಿಮಾನ ನಿಲ್ದಾಣಕ್ಕೆ ವಾಲ್ಮೀಕಿ ಮಹರ್ಷಿಗಳ ಹೆಸರನಿಟ್ಟು ಈ ಜನಾಂಗಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ ಎಂದರು.
ಇನ್ನೂ ರಾಜ್ಯದಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಜನಪರ ಕಾರ್ಯಗಳನ್ನು ರಾಜ್ಯದ ಜನ ಮರೆತಿಲ್ಲ, ಅದರಂತೆ ಬಹುದಿನಗಳ ಬೇಡಿಕೆಯಾದ ಎಸ್ಟಿ ಮೀಸಲಾತಿಯನ್ನು 3% ರಿಂದ 7% ಹಾಗೂ ಎಸ್ಸಿ ಮೀಸಲಾತಿಯನ್ನು 13% ರಿಂದ 17%  ನೀಡಿದ್ದು ಬಿಜೆಪಿ ಸರ್ಕಾರ ಇದನ್ನು ಈ ಜನಾಂಗ ಮರೆತಿಲ್ಲ ಎಂದರು. ಅದರಂತೆ ಎಸ್ಟಿ  ಜನಾಂಗದವರು ಹೆಚ್ಚಾಗಿ ವಾಸಿಸುವ ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಸುಮಾರು 3 ಸಾವಿರ ಕೋಟಿ ಅನುದಾನ ನೀಡಿ ಈ ಜನರ ಮನ ಗೆದ್ದಿದೆ. ಕ್ಷೇತ್ರದ ರೈತರಿಗೆ 8 ನೂರು ಕೋಟಿ ಅನುದಾನ ನೀಡಿ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಹಣ ನೀಡಿದೆ. ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ, ವಸತಿ ಸೇರಿದಂತೆ ಮೂಲ ಸೌಕರ್ಯಗಳಿಗೆ ಒತ್ತು ನೀಡಿದೆ ಇದು ಜನರ ನೆನಪಿನಲ್ಲಿ ಅಚ್ಚಳಿಯದೆ ಇದೆ. ಈ ಜನಪರ ಕಾರ್ಯಗಳು ಈ ಬಾರಿ ಶ್ರೀರಾಮುಲು ಅವರಿಗೆ ಹೆಚ್ಚಿನ ಮತಗಳು ನೀಡಲಿದ್ದಾರೆ. ಸಂಸದರಾಗಿ ಆಯ್ಕೆಮಾಡುವ ವಿಶ್ವಾಸ ಜನರಲ್ಲಿ ಇದೆ, ಈ ಭಾಗದ ಮತದಾರರು ಅವರಿಗೆ ರಾಜಕೀಯ ಪುನರ್ ಜನ್ಮ ನೀಡುವ ತವಕದಲ್ಲಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಮಾಡಿ ಜನರ ನಾಡಿ ಮಿಡಿತ ಅರಿತಿರುವ ನಾನು ಅಂದಾಜು 40 ಸಾವಿರ ಲೀಡ್ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರಿಗೆ ನೀಡುವ ವಿಶ್ವಾಸ ಇದೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸಹ ಕೂಡ್ಲಿಗಿ ಕ್ಷೇತ್ರ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತಗಳನ್ನು ನೀಡಿ ಬಿಜೆಪಿ ಪಕ್ಷಕ್ಕೆ ಬೆಂಬಲ ವ್ಯಕ್ತ ಪಡಿಸಿತ್ತು ಎಂದರು. ಬಿಜೆಪಿಯ ಭದ್ರಕೋಟೆಯಾದ ಈ ಕ್ಷೇತ್ರವು, ಈಗಾಗಲೇ ಬೂತ್ ಮಟ್ಟದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡುತ್ತಿದ್ದು ಸಂಘಟಿತ ಹೋರಾಟಕ್ಕೆ ಜಯ ಸಿಗುವ ವಿಶ್ವಾಸವಿದೆ ಎಂದು ಬಂಗಾರು ಹನುಮಂತು ತಿಳಿಸಿದರು.