ಮಂಗಳೂರು: ಲಕ್ಷದ್ವೀಪ ನಡುವೆ ಹೈಸ್ಪೀಡ್ ಹಡಗು ಸಂಚಾರ ಆರಂಭ
ಮಂಗಳೂರು,ಮೇ.೪-ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸರ್ಕಾರ ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ, ೭ ವರ್ಷದ ನಂತರ ಮತ್ತೆ ಮಂಗಳೂರು-ಲಕ್ಷದ್ವೀಪದ ನಡುವೆ ಹೈಸ್ಪೀಡ್ ಹಡಗು ಸಂಚಾರ ಆರಂಭವಾಗಿದೆ. ಸರ್ಕಾರದಿಂದ ಪರಲಿ ಹೆಸರಿನ ಹಡಗು ಸೇವೆಯನ್ನು ಪ್ರಾರಂಭಿಸಲಾಗಿದೆ. ಸರ್ಕಾರ ಆರಂಭಿಸಿರುವ ಈ ವೇಗದ ನೌಕೆ ಸೇವೆಯ ಸೌಲಭ್ಯದಿಂದ ಲಕ್ಷದ್ವೀಪಕ್ಕೆ ಹೋಗಲು ಮತ್ತು ಅಲ್ಲಿಂದ ಬರಲು ಈಗ ಕೇವಲ ೭ ಗಂಟೆಗಳು ಬೇಕಾಗುತ್ತದೆ. ಗುರುವಾರ, ಪರಲಿಯ ಸೌಲಭ್ಯದಿಂದಾಗಿ, ಪ್ರಯಾಣಿಕರು ಲಕ್ಷದ್ವೀಪದಿಂದ ೧೩ ಗಂಟೆಗಳ ಬದಲು ೭ ಗಂಟೆಗಳಲ್ಲಿ ಮಂಗಳೂರು ಹಳೆ ಬಂದರಿಗೆ ಬಂದು ತಲುಪಿದ್ದಾರೆ.
ಪ್ರತಿ ಪ್ರಯಾಣಿಕರಿಗೆ ೪೫೦ ರೂ. ಪ್ರಯಾಣ ದರ ಇತ್ತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಈ ಹಡಗು ಇಂದು ಬೆಳಗ್ಗೆ ಮತ್ತೆ ಲಕ್ಷದ್ವೀಪದತ್ತ ಪ್ರಯಾಣ ಬೆಳೆಸಿದೆ.
೨೦೨೦ರ ಬಳಿಕ ಲಕ್ಷದ್ವೀಪದಿಂದ ಮಂಗಳೂರಿಗೆ ಪ್ರಯಾಣಿಕರ ಹಡಗು ಸಂಚಾರ ಸ್ಥಗಿತಗೊಂಡಿತ್ತು
ಲಕ್ಷದ್ವೀಪದಿಂದ ಗುರುವಾರ ಸಂಜೆ ಆಗಮಿಸಿದ ಪರೇಲಿ ಎಂಬ ಐಷಾರಾಮಿ ಹಡಗಿನಲ್ಲಿ ಆಗಮಿಸಿದ ಪ್ರಯಾಣಿಕರನ್ನು ನಗರದ ಹಳೆ ಬಂದರಿನಲ್ಲಿ ಸ್ವಾಗತಿಸಲಾಯಿತು. ಈ ಐಷಾರಾಮಿ ಹಡಗಿನಲ್ಲಿ ೧೫೦ ಪ್ರಯಾಣಿಕರು ಸೇರಿದಂತೆ ೮ ಮಂದಿ ಸಿಬ್ಬಂದಿ, ಓರ್ವ ಪೈಲಟ್, ಚೀಫ್ ಇಂಜಿನಿಯರ್, ಸಹಾಯಕ ಇಂಜಿನಿಯರ್ ಬಂದಿಳಿದಿದ್ದಾರೆ.ಪ್ರಯಾಣದ ನಂತರ ಮಾತನಾಡಿದ ಪ್ರಯಾಣಿಕರು ಇದೊಂದು ವಿಭಿನ್ನ ಅನುಭವ. ಈ ಹೊಸ ಹಡಗು ಹಿಂದಿನ ಹಡಗುಗಳಿಗಿಂತ ಹೆಚ್ಚು ಅನುಕೂಲಕರವಾಗಿದೆ ಮತ್ತು ಸಂಪರ್ಕವು ಹೆಚ್ಚಿನ ವೇಗವಾಗಿದೆ. ಅದರ ಸಹಾಯದಿಂದ ಪ್ರಯಾಣಿಕರು ೫ ಗಂಟೆ ಮುಂಚಿತವಾಗಿ ತಲುಪಿದೆವು ಎಂದಿದ್ದಾರೆ.
ಲಕ್ಷದ್ವೀಪ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರವನ್ನು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದರ ಅಡಿಯಲ್ಲಿ ಮಂಗಳೂರು-ಲಕ್ಷದ್ವೀಪ ಟೂರಿಸ್ಟ್ ಲೈನರ್ ಸೇವೆ ಆರಂಭಿಸಲು ಸಿದ್ಧತೆಗಳು ನಡೆಯುತ್ತಿವೆ. ಇದಕ್ಕಾಗಿ ಮೊದಲು ಪ್ರಯೋಗ ನಡೆಸಿ ನಂತರ ಸೇವೆ ಆರಂಭಿಸಲಾಗುವುದು ಎನ್ನಲಾಗಿದೆ.