ಟಾಕ್ಸಿಕ್ : ಕರೀನಾ ಜಾಗಕ್ಕೆ ನಯನತಾರಾ
ಬೆಂಗಳೂರು,ಮೇ.೪-ಟಾಕ್ಸಿಕ್ ಸಿನಿಮಾಗೆ ಮತ್ತೋರ್ವ ಸ್ಟಾರ್ ನಟಿ ಎಂಟ್ರಿ ಆಗಲಿದೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಯನತಾರಾ ಅವರು ಎರಡನೇ ಬಾರಿ ಕನ್ನಡ ಸಿನಿಮಾ ರಂಗಕ್ಕೆ ಬರಲಿದ್ದಾರೆ.
ಈ ಹಿಂದೆ ಅವರು ಉಪೇಂದ್ರ ನಟನೆಯ ಚಿತ್ರದಲ್ಲಿ ನಟಿಸಿದ್ದರು. ಇದೀಗ ಟಾಕ್ಸಿಕ್ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ.ರಾಕಿಂಗ್ ಸ್ಟಾರ್ ಯಶ್ ನಟನೆಯ ’ಟಾಕ್ಸಿಕ್’ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ನಟಿಸಲಿದ್ದಾರೆ ಎಂದು ಸುದ್ದಿ ಆಗಿತ್ತು. ಯಶ್ ಈ ಸಿನಿಮಾದ ನಾಯಕ, ಗೀತಾ ಮೋಹನ್ ದಾಸ್ ನಿರ್ದೇಶಕಿ, ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ ನಿರ್ಮಾಪಕರು ಎನ್ನುವ ವಿಷಯದ ಹೊರತಾಗಿ ಮತ್ತೊಂದು ಮಾಹಿತಿಯನ್ನೂ ಚಿತ್ರತಂಡ ಹಂಚಿಕೊಂಡಿರಲಿಲ್ಲ.
ಬಾಲಿವುಡ್ ನ ಬಹುಬೇಡಿಕೆ ನಟಿ ಈ ಸಿನಿಮಾದ ನಾಯಕಿಯಾಗಲಿದ್ದಾರೆ ಎನ್ನುವುದರ ಜೊತೆಗೆ ಕರೀನಾ ಕಪೂರ್ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂದು ಬಿಟೌನ್ ಮಾತನಾಡಿಕೊಂಡಿತ್ತು. ಇದ್ಯಾವುದೋ ಅಧಿಕೃತ ಮಾಹಿತಿ ಆಗಿರಲಿಲ್ಲ. ಆದರೂ, ಸುದ್ದಿಯಂತೂ ಭರ್ಜರಿ ಸೇಲ್ ಆಗಿತ್ತು. ಈಗ ಕರೀನಾ ಸಿನಿಮಾದಲ್ಲಿ ಇರಲ್ಲ ಎನ್ನಲಾಗಿದೆ.
ಯಶ್ ಅವರ ಸಹೋದರಿಯಾಗಿ ಈ ಸಿನಿಮಾದಲ್ಲಿ ಕರೀನಾ ನಟಿಸಬೇಕಿತ್ತು. ಆದರೆ, ಡೇಟ್ ಹೊಂದಾಣಿಕೆಯ ಕಾರಣದಿಂದಾಗಿ ಅವರು ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ. ಒಡಹುಟ್ಟಿದವರ ಕಥೆಯನ್ನು ಇದು ಒಳಗೊಂಡಿದ್ದರಿಂದ ಯಶ್ ಅವರ ಸರಿಸಮಾನಾಗಿ ಡೇಟ್ ಬೇಕಿತ್ತಂತೆ. ಆದರೆ, ಅಷ್ಟೊಂದು ಸಮಯ ಕರೀನಾ ಬಳಿ ಇಲ್ಲವಂತೆ.