ಮತಗಟ್ಟೆ ಬಳಿ  ನೀರು, ನೆರಲಿನ ಕಡೆ ಗಮನಹರಿಸಿ,     ಸೆಕ್ಟರ್ ಅಧಿಕಾರಿಗಳಿಗೆ ಎಆರ್ ಓ  ಸೂಚನೆ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 4 :-  ಬಳ್ಳಾರಿ ಲೋಕಸಭೆ ಚುನಾವಣೆ ಹಿನ್ನೆಲೆ ಮೇ 7ರಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಮತಗಟ್ಟೆ ವ್ಯಾಪ್ತಿಯಲ್ಲಿ ಬಿಸಿಲಿನ ತಾಪಮಾನ ಇರುವುದರಿಂದ ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಮತದಾರರಿಗೆ ನೆರಳು, ಮತದಾರ ಹಾಗೂ ಮತಗಟ್ಟೆ ಅಧಿಕಾರಿ ಸಿಬ್ಬಂದಿ ಆರೋಗ್ಯದ ಕಡೆ ತಕ್ಷಣ ಆರೋಗ್ಯ ಇಲಾಖೆ ಗಮನ ಹರಿಸುವ ಮತ್ತು ವಿಶೇಷಚೇತನರು ಹಾಗೂ ವಯಸ್ಸಾದವರು ಬಂದರೆ ಅಂತವರಿಗೆ ಕರೆದೋಯ್ಯಲು ರ್ಯಾoಪ್
ದಾರಿಗಳ ವ್ಯವಸ್ಥೆ ಸರಿಪಡಿಸಲಾಗಿದೆಯೇ ಮತ್ತು ಮುಖ್ಯವಾಗಿ ಅಲ್ಲಿನ ಶೌಚಾಲಯ ವ್ಯವಸ್ಥೆ ಸಹ ಸರಿ ಇಲ್ಲದ ಜಾಗದಲ್ಲಿ ಸರಿಪಡಿಸುವ ಜವಾಬ್ದಾರಿ ಸೆಕ್ಟರ್ ಅಧಿಕಾರಿಗಳು ಸರಿಪಡಿಸಿ ಮತದಾನ ದಿನದಂದು ಸವ್ಯವಸ್ಥಿತ ಹಾಗೂ ಶಾಂತಿಯುತ ಚುನಾವಣೆಗೆ ಸಕಲ ಸಿದ್ಧತೆ ಮಾಡಿ ಎಂದು ಸೆಕ್ಟರ್ ಅಧಿಕಾರಿಗಳಿಗೆ, ಪಿಡಿಓ, ಗ್ರಾಮಲೆಕ್ಕಾಧಿಕಾರಿಗಳಿಗೆ ಬಳ್ಳಾರಿ  ಲೋಕಸಭಾ ಚುನಾವಣೆಯ  ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ.ಎಚ್.ಎನ್.ರಘು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಚುನಾವಣಾ ಸಿದ್ಧತಾ ಸಭೆಯಲ್ಲಿ ಮಾತನಾಡುತ್ತಾ  ಕೂಡ್ಲಿಗಿ ತಾಲೂಕಿನಲ್ಲಿ ಮೇ 6 ಮತ್ತು 7 ರಂದು ವಿದ್ಯುತ್ ವ್ಯತ್ಯಯವಾಗದಂತೆ ಕ್ರಮಕೈಗೊಳ್ಳಬೇಕು ಎಂದು ಜೆಸ್ಕಾಂ ಎಇಇ ಪ್ರಕಾಶ್ ಪತ್ತೆನೂರು ಅವರಿಗೆ ಸೂಚಿಸಿದರಲ್ಲದೆ, ಪ್ರತಿ ಮತಗಟ್ಟೆಗಳ ಬಳಿ ಆರೋಗ್ಯ ಸಿಬ್ಬಂದಿಯನ್ನು ನೇಮಿಸಬೇಕು, ಮತದಾರರು ಹಾಗೂ ಮತಗಟ್ಟೆ ಸಿಬ್ಬಂದಿಗಳಿಗೆ ಏನಾದರೂ ಆರೋಗ್ಯದಲ್ಲಿ ತೊಂದರೆಯಾದರೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲು ಕಿಟ್‌ಗಳನ್ನು ನೀಡಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಪಿ.ಪ್ರದೀಪ್ ಕುಮಾರ್‌ಗೆ ಸೂಚಿಸಿದರು. ಇದಲ್ಲದೆ, ಮತಕೇಂದ್ರಗಳಲ್ಲಿ ಟೇಬಲ್, ಕುರ್ಚಿಗಳು ಸೇರಿ ಅಗತ್ಯ ಸಲಕರಣೆಗಳನ್ನು ಒದಗಿಸಲು ಕ್ರಮಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ ಅವರಿಗೆ  ಸೂಚಿಸಿದರು. ಮುಕ್ತ ಹಾಗೂ ನ್ಯಾಯಸಮ್ಮತ ಮತದಾನ ನಡೆಯಲು ಮತಗಟ್ಟೆಗಳ ಬಳಿ ಅಗತ್ಯ ಪೊಲೀಸ್ ಭದ್ರತೆಯನ್ನು ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸಹಾಯಕ ಚುನಾವಣಾಧಿಕಾರಿ ಡಾ.ಎಚ್.ಎನ್.ರಘು ಸೂಚಿಸಿದರು.
ತಾಪಂ ಇಒ ವೈ.ರವಿಕುಮಾರ್ ಮಾತನಾಡಿ, ಕ್ಷೇತ್ರವ್ಯಾಪ್ತಿಯ ಎಲ್ಲಾ ಮತಗಟ್ಟೆಗಳಲ್ಲಿ ಕುಡಿವ ನೀರು, ನೆರಳು, ವಿಕಲಚೇತನರಿಗೆ ವೀಲ್‌ಚೇರ್ ಸೇರಿ ಎಲ್ಲಾ ಸೌಲಭ್ಯಗಳನ್ನು ಆಯಾ ಗ್ರಾಪಂ ವ್ಯಾಪ್ತಿಯ ಪಿಡಿಒಗಳು ಸೇರಿ ಸಿಬ್ಬಂದಿ ಅಚ್ಚುಕಟ್ಟಾಗಿ ಒದಗಿಸಬೇಕು. ಲೋಕಸಭೆ ಚುನಾವಣೆಯನ್ನು ಎಲ್ಲರೂ ಸೇರಿ ಮಾಡುವುದರಿಂದ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ, ಜಿಲ್ಲಾ ತರಬೇತುದಾರ ಸೋಮಪ್ಪ ಬಡಿಗೇರ, ಕೊಟ್ಟೂರು ತಹಸೀಲ್ದಾರ್ ಅಮರೇಶ  ಸೇರಿ 22ಸೆಕ್ಟರ್, ನೋಡಲ್ ಅಧಿಕಾರಿಗಳು, ಗ್ರಾಪಂ ಪಿಡಿಒಗಳು, ಕಂದಾಯ ಇಲಾಖೆ ಮತ್ತು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.
ಮೂಲಸೌಕರ್ಯ ಕಲ್ಪಿಸಿದ ಕುರಿತು ಖಾತರಿ
ಲೋಕಸಭಾ ಚುನಾವಣೆಗೆ ಮೇ 7ರಂದು ನಡೆಯುವ ಮತದಾನಕ್ಕೆ ಎಲ್ಲಾ ಮತಕೇಂದ್ರಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಡಾ.ಎಚ್.ಎನ್.ರಘು ತಿಳಿಸಿದರು. ಎಲ್ಲಾ ಮತಗಟ್ಟೆಗಳಲ್ಲಿ ವಿದ್ಯುತ್, ನೆರಳು, ಕುಡಿವ ನೀರು, ವಿಕಲಚೇತನರಿಗೆ ವೀಲ್‌ಚೇರ್, ಶೌಚಾಲಯಗಳ ಸುಸ್ಥಿತಿ ಸೇರಿ ನಾನಾ ಸೌಲಭ್ಯಗಳನ್ನು ಒದಗಿಸಬೇಕು. ಲೋಪ ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರಲ್ಲದೆ, ಗ್ರಾಪಂ ಪಿಡಿಒ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಂದ ಮತಗಟ್ಟೆಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ಪಡೆದರು.