ಸಂವಿಧಾನವನ್ನು ಬದಲಾಯಿಸುವ  ಗುಪ್ತ ಸೂಚಿಯನ್ನು ಬಿಜೆಪಿ ಹೊಂದಿದೆ: ಶ್ರೀಧರ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮೇ,4-  ಬಾಬಾ ಸಾಹೇಬ್ ಅಂಬೇಡ್ಕರ್  ರಚಿಸಿದ ದೇಶದ ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ ಗುಪ್ತ ಸೂಚನೆಯನ್ನು ಬಿಜೆಪಿ ಹೊಂದಿದೆ.
ಅದಕ್ಕಾಗಿ ಬಿಜೆಪಿ ಮತ್ತು ಎನ್ ಡಿ ಎ ಒಕ್ಕೂಟದ ಅಭ್ಯರ್ಥಿಗಳನ್ನು ಸೋಲಿಸಬೇಕಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶ್ರೀಧರ್ ಕಲಿವೀರ ಹೇಳಿದ್ದಾರೆ.
ಅವರಿಂದು ನಗರದಲ್ಲಿ ಸುದ್ದಿಗೋಷ್ಟಿ‌ ನಡೆಸಿ.  ಮೇಲ್ವರ್ಗದ ಹಿತ ಕಾಯಲು,  ಸಂವಿಧಾನ ಬದಲಾಯಿಸುವ ಚಿಂತನೆ ಬಿಜೆಪಿಯದ್ದು. ಅದಕ್ಕಾಗಿ ನಾಲ್ಕು ನೂರು ಕ್ಷೇತ್ರಗಳಲ್ಲಿ ಜಯದ ಗುರಿ‌ಹೊಂದಿದೆ.
ಒಂದು ಪಕ್ಷದ ಸೋಲು, ಗೆಲುವು ಅಲ್ಲ. ಭಾರತ ದೇಶದ ಗೆಲುವು ಸೋಲಾಗಿದೆ‌ ಇದು ಪ್ರಜಾಪ್ರಭುತ್ವ ಅಂತ್ಯಗೊಳಿಸುವ, ಸರ್ವಾಧಿಕಾರ ಜಾರಿಗೊಳಿಸುವ ಹುನ್ನಾರವಾಗಿದೆ.
ಅದುವೇ ಹಿಂದುತ್ವದ ಮುಖ, ಅದು ನರೇಂದ್ರ ಮೋದಿ ಎಂದು ಆರೋಪಿಸಿದರು.
ರಾಜ್ಯದಲ್ಲಿ ಪಂಚಗ್ಯಾರೆಂಟಿ ಯೋಜನೆ ಜಾರಿಗೆ ತಂದಿರುವ ಕಾಂಗ್ರೆಸ್ ಪಕ್ಷ  ಈ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಪಂಚ ನ್ಯಾಯಗಳ‌ ಮೂಲಕ 25 ಗ್ಯಾರೆಂಟಿಗಳನ್ನು ಜಾರಿಗೆ ತಂದು ದೇಶದ  ಸಮ್ರಗ ಅಭಿವೃದ್ಧಿ, ಜನರ ಸಂಕಷ್ಟಕ್ಕೆ ಸ್ಪಂದಿಸುವ ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣ ಮಾಡಲು ಸಂಕಲ್ಪ ಮಾಡಿದೆ.
ಸಂವಿಧಾನವನ್ನು ಸಂರಕ್ಷಿಸುತ್ತೇವೆ ಎಂದು ನೀಡಿರುವ ಗ್ಯಾರೆಂಟಿಯನ್ನು ಕಾಂಗ್ರೆಸ್ ನೀಡಿದೆ. ಅದ್ದರಿಂದ ಕಾಂಗ್ರೆಸ್ ಗೆ ಮತ ನೀಡೋಣ ಇಲ್ಲಿನ ಅಭ್ಯರ್ಥಿ ತುಕರಾಂ ಅವರನ್ನು ಗೆಲ್ಲಿಸೋಣ ಎಂದರು.
ಸುದ್ದಿಗೋಷ್ಟಿಯಲ್ಲಿ ಒಕ್ಕೂಟದ ಕಾರ್ಯಾಧ್ಯಕ್ಷರಾದ ರಾಜಗೋಪಾಲ್ ಡಿ.ಎಸ್. ಎಂ.ಗೋವಿಂದರಾಜುಲು, ಎಂ.ಗುರುಮೂರ್ತಿ, ರಾಜ್ಯ ಕಾರ್ಯದರ್ಶಿ ಎ.ಗೋಪಾಲ್,  ಡಿಎಸ್ ಎಸ್ ಪ್ರೊ.ಕೃಷ್ಣಪ್ಪ ಬಣದ ಬಳ್ಳಾರಿ ಜಿಲ್ಲಾ ಸಂಚಾಲಕ ಗೋವರ್ಧನ್ ಮೊದಲಾದವರು ಇದ್ದರು.