ಬಲಿಷ್ಟ ಪ್ರಜಾಪ್ರಭುತ್ವಕ್ಕೆ ತಪ್ಪದೇ ಮತದಾನ ಮಾಡಿ
ಬಾಗಲಕೋಟೆ:ಮೇ4 : ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಾವಿರಾರು ಜನ ಮೊಬೈಲ್ ಟಾರ್ಚ ಬೆಳಗಿಸುವದರ ಮೂಲಕ ವಿನೂತನ ಪ್ರಯೋಗಕ್ಕೆ ಜಿಲ್ಲಾ ಸ್ವೀಪ್ ಸಮಿತಿ ಮುಂದಾಯಿತು.
ಮೈ ಓಟ ಮೈ ರೈಟ್ 2024 (ನಮ್ಮ ಮತ ನಮ್ಮ ಹಕ್ಕು) ಎಂಬ ಘೋಷ ವ್ಯಾಕ್ಯವನ್ನು ಮೊಬೈಲ್ ಟಾರ್ಚ ಬೆಳಕಿನಲ್ಲಿ ಮೂಡುವಂತೆ ಮಾಡಿ ಎಲ್ಲರ ಗಮನ ಸೆಳೆಯಲಾಯಿತು. ಇಂತಹ ವಿನೂತನ ಪ್ರಯೋಗದ ಮೂಲಕ ಮತದಾನ ಮಹತ್ವನ್ನು ಸಾರುವ ಜಾಗೃತಿ ಸಂದೇಶಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಲ್ಲಾ ಪಂಚಾಯತ ಸಿಇಓ ಶಶಿಧರ ಕುರೇರ ಜಂಟಿಯಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಜಿಲ್ಲೆಯ ಅರ್ಹ ಮತದಾರರಿಗೆ ಮತದಾನ ಜಾಗೃತಿಯ ಸಂದೇಶದ ಬಗ್ಗೆ ನಮ್ಮ ಮೂಲಕ ನಿಮ್ಮ ಮೂಲಕ ತಲುಪಿಸುವ ಕಾರ್ಯವಾಗಬೇಕು. ಮೇ 7 ರಂದು ತಪ್ಪದೇ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸುವಂತೆ ಮಾಡುವ ನಿಟ್ಟಿನಲ್ಲಿ ಈ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ ಎಂದರು.
ಮತದಾನ ಜಾಗೃತಿಯ ಸಂದೇಶ ಜಿಲ್ಲೆಯ ಎಲ್ಲ ಮನೆ ಮನೆಗಳಿಗೆ ತಲುಪಲಿ. ನಾವು ಪ್ರಜಾಪ್ರಭುತ್ವವನ್ನು ಗೆಲ್ಲಿಸಬೇಕು ಅಂತ ಅಂದರೆ ಮೇ 7ಕ್ಕೆ ಮತಗಟ್ಟೆಗಳಿಗೆ ಹೋಗಬೇಕು. ಈ ಒಂದು ಸಂದೇಶ, ಕಾರ್ಯಕ್ರಮ ಎಲ್ಲೆಡೆಗೆ ತಲುಪಲಿ ಎಂಬ ಸದಾಶಯದಿಂದ ಜಿಲ್ಲೆಯಲ್ಲಿ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಿವಿ. ಕಳೆದ ಚುನಾವಣೆಯ ಮತದಾನ ಪ್ರಮಾಣಕ್ಕಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆದಾಗ ಮಾತ್ರ ನಾವು ಹಮ್ಮಿಕೊಂಡ ಚಟುವಟಿಕೆಗಳಿಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.
ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಆಗಿರುವ ಜಿ.ಪಂ ಸಿಇಓ ಶಶಿಧರ ಕುರೇರ ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಯೋಜನಾ ನಿರ್ದೇಶಕ ಶಶಿಕಾಂತ ಶಿವಪೂರೆ, ಜಿಲ್ಲಾ ಸ್ವೀಪ್ ಐಕಾನ್ ಸಿದ್ದಾರೂಢ ಕೊಪ್ಪದ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಮರಟ್ಟಿ, ಅಂಬೇಡ್ಕರ ಅಭಿವೃದ್ದಿ ನಿಗಮದ ಜಿಲ್ಲಾ ಅಧಿಕಾರಿ ರಮೇಶ ಚವ್ಹಾಣ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರಪಾದ ಡೂಗನವರ, ನಗರಸಭೆ ಪೌರಾಯುಕ್ತ ವಾಸಣ್ಣ ಆರ್. ಸೇರಿದಂತೆ ಪೌರಕಾರ್ಮಿಕರು, ವಿಕಲಚೇತನರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.