ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ: ಪರಮೇಶ್ವರ
ಸಂಜೆವಾಣಿ ವಾರ್ತೆ.
ಚಿತ್ತಾಪುರ: ಮೇ.4:ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ದೆಹಲಿಯಲ್ಲಿ ಅಧಿಕಾರಕ್ಕೆ ಬರುವಂತೆ ಆಶೀರ್ವದಿಸಿ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಮನವಿ ಮಾಡಿದರು.
ತಾಲೂಕಿನ ಕರದಾಳ ಗ್ರಾಮದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಲೋಕಸಭಾ ಚುನಾವಣೆ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು ಪ್ರಚಾರದ ಸಮಾವೇಶದ ಕುರಿತು ಮಾತನಾಡಿದ
ಬಿಜೆಪಿ ಪಕ್ಷ ಧರ್ಮದ ಆಧಾರದ ಮೇಲೆ ರಾಜಕೀಯ ಮಾಡಿಕೊಂಡು ಮತ ಕೇಳುತ್ತಿದೆ ಎಂದು ಆರೋಪಿಸಿದ ಗೃಹ ಸಚಿವರು, ಹಿಂದೂ ಧರ್ಮದ ಹೆಸರಿನಲ್ಲಿ ಮಾಡಬಾರದ ಕೆಲಸಗಳನ್ನೆಲ್ಲ ಮಾಡುತ್ತಿದ್ದಾರೆ. ನಾವು ಯಾರು ಹಿಂದೂಗಳು ಅಲ್ಲವೇ? ನಾವು ರಾಮನ ಭಕ್ತರಲ್ಲವೇ? ದೇವಾಲಯಕ್ಕೆ ಹೋಗುವುದಿಲ್ಲವೇ? ಧರ್ಮದ ಆಧಾರದ ಮೇಲೆ ಚುನಾವಣೆಗೆ ಬಂದವರಿಗೆ ಮತ ಹಾಕಬೇಡಿ ಎಂದು ಪರಮೇಶ್ವರ ಹೇಳಿದರು.
ಯುವಕರಿಗೆ ಉದ್ಯೋಗ ಕೊಡಲು ವಿಫಲರಾಗಿರುವ ಪ್ರಧಾನಿ ನರೇಂದ್ರ ಮೋದಿ ಪಕೋಡ ಮಾರಲು ಹೇಳಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದು 18,171 ಕೋಟಿ ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ಸಚಿವರಾದ ಕೃಷ್ಣ ಭೈರಗೌಡ ಹಾಗೂ ಪ್ರಿಯಾಂಕ್ ಖರ್ಗೆ ಕೊನೆಗೆ ಸಿಎಂ ಹೋಗಿ ಬಂದರು ಆಗಲೂ ಪ್ರಯೋಜನವಾಗಲಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಕೇಂದ್ರದ ವಿರುದ್ದ ಸುಪ್ರಿಂ ಕೋರ್ಟ್ ಗೆ ಹೋಗಬೇಕಾಯಿತು. ಬರ ಪರಿಹಾರ ಬಿಡುಗಡೆ ಆಗ್ರಹಿಸಿ ರಾಜ್ಯ ಸರ್ಕಾರ ಕೇಂದ್ರದ ವಿರುದ್ದ ಕೇಸು ಹಾಕಿದ್ದು ಬಹುಶಃ ಇದೇ ಮೊದಲು. ಯಾವಾಗ ಕೋರ್ಟ್ ಛೀಮಾರಿ ಹಾಕಿತೋ ಆಗ 3474 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರ ಮನಸಿನಾಳದ ಮಾತುಗಳನ್ನು ನೀವೆಲ್ಲ ಕೇಳಿದ್ದೀರಿ. ಅವರು ಮಾತು ಕೇಳಿದಾಗ ನಮಗೆ ಕಣ್ಣಲ್ಲಿ ನೀರು ಬಂತು.ಕಳೆದ ಸಲ ಅವರನ್ನ ಸೋಲಿಸಿದ್ದೀರಿ. ಈ ಸಲ ಅವರಿಗೆ ಆಶೀರ್ವಾದ ಮಾಡಿ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಕಾಂಗ್ರೆಸ್ ಗೆಲ್ಲುವುದು ಕೂಡಾ ಅಷ್ಟೇ ಸತ್ಯ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ನಿಲ್ಲಿಸುವುದಿಲ್ಲ ಬಿಜೆಪಿ ಅವರು ಎಷ್ಟೇ ತಿಪ್ಪರಲಾಗ ಹಾಕಿದರೂ ನಿಲ್ಲಿಸಲ್ಲಾ ಎಂದರು. ಅಭ್ಯರ್ಥಿಯನ್ನು ಖರ್ಗೆ ಸಾಹೇಬ್ರು ನಿಲ್ಲಿಸಿಲ್ಲ ಕಾಂಗ್ರೆಸ್ ಪಕ್ಷ ನಿಲ್ಲಿಸಿದೆ ಬಿಜೆಪಿಯವರ ಮಾತ್ತು ನಂಬಬೇಡಿ ಎಂದರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ಜನರು ಆರ್ಥಿಕ ಸಮಾನತೆ ಸಾಧಿಸುವುದು, ಮಹಿಳೆಯರು ಮುಖ್ಯವಾಹಿನಿಗೆ ಬರುವುದು ಬಿಜೆಪಿಯವರಿಗೆ ಬೇಕಿಲ್ಲ. ಹಾಗಾಗಿ, ಆರ್ಥಿಕ ಸಬಲೀಕರಣ ಸಾಧಿಸಲು ಹಾಗೂ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತ ಕಾಂಗ್ರೆಸ್ ಸರ್ಕಾರದ ಐದು ಯೋಜನೆಗಳನ್ನು ಬಿಜೆಪಿ ವಿರೋಧಿಸುತ್ತಿದೆ ಎಂದು ಟೀಕಿಸಿದರು.ಕಳೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸೋಲು ಅನುಭವಿಸಿದ್ದರಿಂದ ಅಭಿವೃದ್ದಿಯಲ್ಲಿ ಕುಂಠಿತ ಕಂಡಿದ್ದು ಈ ಭಾಗ ದಶಕಗಳ ಕಾಲ ಹಿಂದೆ ಬಿದ್ದಿದೆ. ಸಂಸದ ಉಮೇಶ ಜಾಧವ ಅಭಿವೃದ್ದಿ ಮಾಡುವಲ್ಲಿ ವಿಫಲರಾಗಿದ್ದರಿಂದ ಅವರ ವಿರುದ್ದ ಗೋ ಬ್ಯಾಕ್ ಅಭಿಯಾನ ಪ್ರಾರಂಭವಾಗಿದೆ. ಸಾರ್ವಜನಿಕರು ಕೇಳುವ ಅಭಿವೃದ್ದಿಯ ಲೆಕ್ಕ ಕೊಡಲು ಅವರು ವಿಫಲರಾಗಿದ್ದಾರೆ ಎಂದರು.
ವೇದಿಕೆಯ ಮೇಲೆ ಅನೆಕಲ್ ಶಾಸಕ ಶಿವಣ್ಣ, ಮಹೆಬೂಬ್ ಸಾಹೇಬ್, ಭೀಮಣ್ಣ ಸಾಲಿ, ಶಿವಾನಂದ್ ಪಾಟೀಲ್, ರಮೇಶ್ ಮರಗೋಳ, ಮುಕ್ತಾರ್ ಪಟೇಲ್, ನಾಗರೆಡ್ಡಿ ಪಾಟೀಲ್ ಕರದಾಳ, ರಾಜಶೇಖರ ತಿಮ್ಮನಾಯಕ, ಜುಮ್ಮಣ್ಣ ಪೂಜಾರಿ, ಜಗದೀಶ ಚವ್ಹಾಣ್, ರಷೀದ್ ಸೇಠ್, ಬಾಬು ಒಂಟಿ, ಹಣಮಂತ ಸಂಕನೂರ, ಪ್ರಭುರಾಜ ಕಾಂತಾ, ಅಯ್ಯಣ್ಣಗೌಡ ಪಾಟೀಲ್, ವಿಶ್ವನಾಥ್ ರೆಡ್ಡಿ ಕರದಾಳ, ಶಿವರುದ್ರ ಭೇಣಿ, ಸೇರಿದಂತೆ ಇತರರು ಇದ್ದರು.