ಸಮಸ್ಯೆ ಹೊಂದಿರುವವರ ಅಪಹಾಸ್ಯ ಬೇಡ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.04:- ತೊದಲುವ ಸಮಸ್ಯೆ ಎದುರಿಸುತ್ತಿರುವ ಮಕ್ಕಳು ಹಾಗೂ ವಯಸ್ಕರ ಬಗ್ಗೆ ಹಾಸ್ಯ ಮಾಡಬೇಡಿ. ಸೂಕ್ತ ಚಿಕಿತ್ಸೆ ಕೊಡಿಸಿ, ಆರಂಭದಲ್ಲಿಯೇ ಸಮಸ್ಯೆ ಗುರುತಿಸಿ ತರಬೇತಿ ನೀಡಿದರೆ ಎಲ್ಲರಂತೆ ಮಾತನಾಡಲು ಸಾಧ್ಯ ಎಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯಿಷ್) ತಜ್ಞ ಪೆÇ್ರ.ಎಂ.ಸಂತೋಷ್ ಪ್ರತಿಪಾದಿಸಿದರು.
ಅಗ್ರಹಾರದ ರಾಜೇಂದ್ರ ಭವನದಲ್ಲಿ ಜೆಎಸ್‍ಎಸ್ ವಾಕ್ ಮತ್ತು ಶ್ರವಣ ಸಂಸ್ಥೆಯು ಶುಕ್ರವಾರ ಆಯೋಜಿಸಿದ್ದ ತೊದಲುವಿಕೆ ಚಿಕಿತ್ಸಾ ವಿಧಾನದಲ್ಲಿನ ಪ್ರಗತಿ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತೊದಲುವಿಕೆಯ ಸಮಸ್ಯೆಯು ನೂರು ಜನರಲ್ಲಿ ಇಬ್ಬರಿಗೆ ಇರುತ್ತದೆ. ಸಿನಿಮಾ ನಾಟಕಗಳಲ್ಲಿಯೂ ತೊದಲಿನ ಸಮಸ್ಯೆಯವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ. ಈ ಬಗೆಗಿನ ಮೂಢನಂಬಿಕೆ ಹಾಗೂ ಆಚರಣೆಗಳು ಪೀಡಿತರ ಆತ್ಮವಿಶ್ವಾಸ ಕುಂದಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಸ್ಯೆ ಪೀಡಿತರನ್ನು ಆಸ್ಪತ್ರೆ ಹಾಗೂ ಚಿಕಿತ್ಸೆ ತರಬೇತಿ ಕೇಂದ್ರಕ್ಕೆ ಕರೆದೊಯ್ಯದೇ ಧಾರ್ಮಿಕ ಕೇಂದ್ರಕ್ಕೆ ಕರೆದುಕೊಂಡು ಹೋಗುವುದು. ನಾಲಿಗೆ ಲೇಹ್ಯ ಹಚ್ಚಿಸುವ ಪರಿಪಾಠವನ್ನು ಆರಂಭಿಸುತ್ತಾರೆ. ಇದು ಸಮಸ್ಯೆಯನ್ನು ಸಂಕೀರ್ಣಗೊಳಿಸುತ್ತದೆಯೇ ಹೊರತು ಯಾವುದೇ ಪರಿಹಾರ ಅಸಾಧ್ಯ ಎಂದು ಎಚ್ಚರಿಸಿದರು.
ವೈದ್ಯರೂ ತೊದಲುವ ಸಮಸ್ಯೆಯುಳ್ಳವರಿಗೆ ಸರಿಯಾಗಿ ಮಾರ್ಗದರ್ಶನ ನೀಡುತ್ತಿಲ್ಲ. ಮಕ್ಕಳಿದ್ದಾಗಲೇ ಸಮಸ್ಯೆ ಗುರುತಿಸಿ ತರಬೇತಿ ಚಿಕಿತ್ಸೆ ಕೊಡಿಸಿದರೆ ಶೇ.100ರಷ್ಟು ಬಗೆಹರಿಸಲು ಸಾಧ್ಯ. ನುರಿತ ವಾಕ್ ತಜ್ಞರನ್ನು ಭೇಟಿಯಾಗಬೇಕು. ಸಂಪೂರ್ಣ ಗುಣ ಪಡಿಸಲು ಪೆÇೀಷಕರೂ ಕಾಳಜಿ ವಹಿಸುವುದು ಅಗತ್ಯವಾಗಿದೆ ಎಂದರು.
ಆರಂಭದಲ್ಲಿಯೇ ಚಿಕಿತ್ಸೆ ನೀಡದಿದ್ದರೆ ವಯಸ್ಕರಾದಾಗ ಹೆಚ್ಚು ಸಮಯ ಬೇಕಾಗುತ್ತದೆ. ತೊಂದರೆಗೆ ಒಳಗಾದವರಲ್ಲಿ ಆತ್ಮವಿಶ್ವಾಸ ಇರುವುದಿಲ್ಲ. ಜೀವನದಲ್ಲಿ ಏನೂ ಸಾಧನೆ ಮಾಡಲಿಲ್ಲವೆಂಬ ಕೊರಗಿರುತ್ತದೆ. ಮಾನಸಿಕ ಖಿನ್ನತೆ, ಭಯದಿಂದ ಇರುತ್ತಾರೆ. ಹೀಗಾಗಿ ಅವರಲ್ಲಿ ನಡವಳಿಕೆಯ ಬಗ್ಗೆಯೂ ಥೆರಪಿಗಳನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಸಚಿವ ಡಾ.ಬಿ.ಮಂಜುನಾಥ, ಜೆಎಸ್‍ಎಸ್ ವಾಕ್ ಮತ್ತು ಶ್ರವಣ ಸಂಸ್ಥೆಯ ಪ್ರಾಂಶುಪಾಲೆ ಡಾ.ಆರ್.ಸುಮಾ, ಡಾ.ಎಸ್.ವಿ.ನರಸಿಂಹನ್ ಹಾಜರಿದ್ದರು.