ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಕೊರತೆಯಿಲ್ಲ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.04:- ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಕೊರತೆಯಿಲ್ಲ. ನರ್ಸಿಂಗ್ ಪದವೀಧರರಿಗೆ ದೇಶ-ವಿದೇಶದಲ್ಲಿ ಸೇವೆ ಮಾಡಲು ಅವಕಾಶಗಳ ಬಾಗಿಲು ತೆರೆದಿದೆ ಎಂದು ನಿವೃತ್ತ ಮೇಜರ್ ಜನರಲ್ ಎಲಿಜಬೆತ್ ಜಾನ್ ಹೇಳಿದರು.
ಜೆಎಸ್‍ಎಸ್ ಆಸ್ಪತ್ರೆಯ ಸಭಾಂಗಣದಲ್ಲಿ ಜೆಎಸ್‍ಎಸ್ ನರ್ಸಿಂಗ್ ಕಾಲೇಜಿಗೆ ಪ್ರವೇಶಾತಿ ಪಡೆದ ಶುಶ್ರೂಷಕ ವಿದ್ಯಾರ್ಥಿಗಳಿಗೆ ಶುಕ್ರವಾರ ಆಯೋಜಿಸಿದ್ದ ಸಮರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 2050ರ ವೇಳೆಗೆ ದೇಶದಲ್ಲಿ ವಯೋವೃದ್ಧರ ಸಂಖ್ಯೆ ಹೆಚ್ಚಲಿದೆ. ಹೀಗಾಗಿ, ಈಗ ತರಬೇತಿ ಪಡೆಯುತ್ತಿರುವ ಶುಶ್ರೂಷಕರಿಗೆ ಉದ್ಯೋಗದಲ್ಲಿ ವಿಪುಲ ಅವಕಾಶಗಳಿವೆ ಎಂದು ತಿಳಿಸಿದರು.
ವೈದ್ಯಕೀಯ ಕ್ಷೇತ್ರ ವಿಸ್ತಾರವಾಗಿ ಬೆಳೆದಿದೆ. ಆಸ್ಪತ್ರೆಗಳು ಸ್ಥಾಪನೆಯಾಗುತ್ತಿವೆ. ಹೀಗಾಗಿ ಜಾಗತಿಕವಾಗಿ ನುರಿತ ಶುಶ್ರೂಷಕರ ಅಭಾವವಿದ್ದು, ವಿದ್ಯಾರ್ಥಿಗಳು ಇದೇ ಕ್ಷೇತ್ರವನ್ನು ಆರಿಸಿಕೊಂಡಿರುವುದು ಸರಿಯಾಗಿದೆ ಎಂದರು.
ಜೀವವನ್ನು ಉಳಿಸುವ ಜವಾಬ್ದಾರಿ ಶುಶ್ರೂಶಕರ ಮೇಲಿದೆ. ಪೆÇೀಷಕರಿಗೆ ತೋರುವ ಕಾಳಜಿ ಮತ್ತು ಆರೈಕೆಯನ್ನೇ ರೋಗಿಗಳ ಮೇಲೂ ತೋರಬೇಕು. ಮಾನವೀಯತೆ, ಕಾರುಣ್ಯ, ಸೇವೆಯೇ ವಿದ್ಯಾರ್ಥಿಗಳ ಗುರಿಯಾಗಬೇಕು ಎಂದು ಹೇಳಿದರು.
ವೈದ್ಯರಷ್ಟೇ ಗೌರವ ಶುಶ್ರೂಷಕರಿಗೂ ಸಿಗುತ್ತದೆ. ಅವರು ಕೇವಲ ಒಂದು ವಿಷಯದಲ್ಲಿ ತಜ್ಞರಿರುತ್ತಾರೆ. ಆದರೆ, ಶುಶ್ರೂಷಕರಿಗೆ ಎಲ್ಲ ವೈದ್ಯಕೀಯ ವಿಷಯಗಳ ಮೇಲೂ ಜ್ಞಾನವಿರುತ್ತದೆ. ರೋಗಿಗಳ ನಡುವೆ ಹೆಚ್ಚು ಒಡನಾಟ ಇರುವುದರಿಂದ ಅನುಭವವೂ ದಟ್ಟವಾಗಿರುತ್ತದೆ ಎಂದು ತಿಳಿಸಿದರು.
ರೋಗಿಗಳ ದೈಹಿಕ ಹಾಗೂ ಮಾನಸಿಕ ಸ್ಥಿತಿಗೆ ಅನುಗುಣವಾಗಿ ಆರೈಕೆ ಮಾಡುವ ಅನುಭವ ಗಳಿಸಿಕೊಳ್ಳಬೇಕು. ನರ್ಸಿಂಗ್‍ನಲ್ಲೂ ಬಹುಶಿಸ್ತೀಯ ಕಲಿಕೆಗೆ ಅವಕಾಶವಿದ್ದು, ಸಂಶೋಧನೆ ಹಾಗೂ ಪ್ರಯೋಗಗಳಿಗೆ ಒಡ್ಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೆಲಸದ ಒತ್ತಡದ ನಡುವೆ ಶುಶ್ರೂಷಕರು ವೈಯಕ್ತಿಕ ಆರೋಗ್ಯದ ಕಡೆಗೆ ಆದ್ಯತೆ ನೀಡಬೇಕು. ಸ್ವಯಂ ತರಬೇತಿಯನ್ನು ಪಡೆಯಬೇಕು. ಕೌಶಲ ಹೆಚ್ಚಿಸಿಕೊಳ್ಳಬೇಕು ಎಂದರು.
ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟ್‍ಸೂರಮಠ, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್, ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ.ಮಧು, ಜೆಎಸ್‍ಎಸ್ ಆಸ್ಪತ್ರೆಯ ಶುಶ್ರೂಷಕ ಸೇವೆಗಳ ಮುಖ್ಯಸ್ಥೆ ಜಾನೆಟ್ ಮಥೈಯಾಸ್, ಪ್ರಾಂಶುಪಾಲೆ ಅಶ್ವಥಿದೇವಿ ಹಾಜರಿದ್ದರು.