ಚಾಮರಾಜನಗರ ಜಿಲ್ಲೆಯ ಹಲವೆಡೆ ಭರ್ಜರಿ ಮಳೆ: ಮನೆ, ಬೆಳೆ ಹಾನಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.04- ಬಿಸಿಲಿನಿಂದ ಕಂಗೆಟ್ಟಿದ್ದ ಗಡಿಜಿಲ್ಲೆ ಚಾಮರಾಜನಗರ ವಿವಿಧೆಡೆ ಶುಕ್ರವಾರ ಸಂಜೆ ಭರ್ಜರಿ ಮಳೆಯಾಗಿದ್ದು ವರುಣಾಗಮನಕ್ಕೆ ಜನರು ಹರ್ಷಗೊಂಡಿದ್ದಾರೆ.
ಚಾಮರಾಜನಗರ ತಾಲೂಕಿನ ಅರಕಲವಾಡಿ, ಚೆನ್ನಪ್ಪನಪುರ, ಕೆ.ಗುಡಿ ಅರಣ್ಯ ಪ್ರದೇಶ, ಹನೂರು ಪಟ್ಟಣ ಹಾಗೂ ಹನೂರು ತಾಲೂಕಿನ ಹೂಗ್ಯಂ, ಶಾಗ್ಯ ಗುಂಡ್ಲುಪೇಟೆ ಪಟ್ಟಣ ಮತ್ತು ತಾಲೂಕಿನ ಶಿವಪುರ, ಬೊಮ್ಮಲಾಪುರ, ಕೋಡಹಳ್ಳಿ, ಹಂಗಳ, ಮಾಡ್ರಹಳ್ಳಿ ಸುತ್ತಮುತ್ತಲು ಗುಡುಗು-ಸಿಡಿಲು ಆರ್ಭಟದೊಂದಿದೆ ಮಳೆ ಸುರಿದಿದೆ. ಅರಣ್ಯ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವುದರಿಂದ ಬೆಂಕಿ ಆತಂಕ ದೂರವಾಗಿದೆ.
ಇನ್ನು, ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಜಿಲ್ಲೆಯ ಹಲವೆಡೆ ಮನೆ- ಬೆಳೆಗೆ ಹಾನಿಯಾಗಿದೆ. ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದಲ್ಲಿ ವಿಶೇಷ ಚೇತನ ಮಹಿಳೆಯ ಪೆಟ್ಟಿಗೆ ಅಂಗಡಿ ಮೇಲೆ ಬೇವಿನಮರ ಬಿದ್ದು ಸಂಪೂರ್ಣ ಜಖಂ ಆಗಿದೆ.
ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಜಮೀನಿನಲ್ಲಿದ್ದ ಮನೆಗಳ ಛಾವಣಿ ಹಾರಿಹೋಗಿದ್ದು ಹನೂರು ತಾಲೂಕಿನ ಪುಷ್ಪಾಪುರ ಗ್ರಾಮದಲ್ಲೂ ಮನೆಗಳಿಗೆ ಹಾನಿಯಾಗಿವೆ.
3 ಎಮ್ಮೆ ಸಾವು: ಹನೂರು ತಾಲೂಕಿನ ಶಾಗ್ಯ ಗ್ರಾಮದ ರತ್ಮಮ್ಮ ಎಂಬವರಿಗೆ ಸೇರಿದ 3 ಎಮ್ಮೆಗಳು ಸಿಡಿಲಿನ ಬಡಿತಕ್ಕೆ ಮೃತಪಟ್ಟಿದ್ದು ರೈತ ಮಹಿಳೆ ತನ್ನ ಎಮ್ಮೆ ಕಳೆದುಕೊಂಡು ರೋಧಿಸುತ್ತಿದ್ದು ಎಲ್ಲರ ಮನಕಲಕುವಂತಿತ್ತು.
ಹನೂರು ತಾಲೂಕಿನ ಹೂಗ್ಯಂನಲ್ಲಿ 15 ಎಕರೆ ಪರಂಗಿ, 20 ಎಕರೆ ಬಾಳೆ, ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ಲೋಕೇಶ್ ಎಂಬವರಿಗೆ ಸೇರಿದ ಬಾಳೆ, ನಾಗಶೆಟ್ಟಿ ಎಂಬವರ ಸಪೆÇೀಟಾ ತೋಟ ಬಿರುಗಾಳಿಗೆ ನೆಲಕಚ್ಚಿದೆ. ಬಿಸಿಲಿನಲ್ಲಿ ಬೆಂಡಾಗಿದ್ದ ಜನರಿಗೆ ವರುಣ ತಂಪೆನಿಸಿದರೇ ರೈತರಿಗೆ ಸಂಕಷ್ಟ ಎದುರಾಗಿದೆ.