ಲಿಂಗಾಯತ ಸಮುದಾಯಕ್ಕೆ ನನ್ನಿಂದ ತೊಂದರೆ ಆರೋಪ ಹಸಿ ಸುಳ್ಳು: ರಾಜು ಆಲಗೂರ
ಸಂಜೆವಾಣಿ ವಾರ್ತೆ,
ವಿಜಯಪುರ:ಮೇ.4:ರಾಜು ಆಲಗೂರ ಗೆದ್ದರೆ ಲಿಂಗಾಯತರಿಗೆ ತೊಂದರೆಯಾಗುತ್ತದೆ ಎಂದು ಸಂಸದ ರಮೇಶ ಜಿಗಜಿಣಗಿ ಅವರು ನನ್ನ ಬಗ್ಗೆ ಅಪಪ್ರಚಾರ ಮಾಡಿಸುತ್ತಿದ್ದಾರೆ. ಇದು ಹಸಿ ಸುಳ್ಳು ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಹೇಳಿದರು.
ಶನಿವಾರ ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸುಸಂಸ್ಕøತ ಕುಟುಂಬದಿಂದ ಬಂದಿದ್ದೇನೆ. ಜಿಗಜಿಣಗಿಗೆ ಯಾವುದೇ ಚುನಾವಣೆ ವಿಷಯ ಇಲ್ಲದ್ದರಿಂದ ಈ ರೀತಿ ಅಪಪ್ರಚಾರಕ್ಕೆ ಮುಂದಾಗಿದ್ದಾರೆ ಎಂದರು.
ನಾನು ಡಿಎಸ್ ಎಸ್ ಸಂಘಟನೆಯಲ್ಲಿದ್ದರೂ ಎಲ್ಲ ಸಮುದಾಯದವರನ್ನು ತೆಗೆದುಕೊಂಡು ಹೋಗಿ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದೇನೆ ಎಂದರು. ಒಂದೊಮ್ಮೆ ನಾನು ಲಿಂಗಾಯತರಿಗೆ ತೊಂದರೆ ಕೊಟ್ಟಿದ್ದು ಸಾಬೀತು ಪಡಿಸಿದರೆ ಈ ಕ್ಷಣದಿಂದಲೇ ಚುನಾವಣೆ ಕಣದಿಂದ ನಿವೃತ್ತಿಯಾಗುತ್ತೇನೆ ಎಂದು ಆಲಗೂರ ಘೋಷಿಸಿದರು.
ಸೋಲುವ ಭೀತಿ, ಹತಾಶೆಯಿಂದ ಜಿಗಜಿಣಗಿ ಅವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮೀಸೆ ಎನ್ನುವ ವ್ಯಕ್ತಿಯಿಂದ ನನ್ನ ವಿರುದ್ಧ ಆರೋಪ ಮಾಡಿಸುತ್ತಿದ್ದಾರೆ. ಇಂಥ ಬಾಲಿಶ ಹೇಳಿಕೆ, ಅಪಪ್ರಚಾರ ಕೈ ಬಿಟ್ಟು ಈ ಕೂಡಲೇ ಜಿಗಜಿಣಗಿ ಕ್ಷಮೆಯಾಚಿಸಬೇಕು ಎಂದು ಆಲಗೂರ ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮುಖಂಡರಾದ ಎಂ.ಆರ್. ಪಾಟೀಲ, ಡಾ. ರಾಜೇಂದ್ರಬಾಬು ನಾಯಕ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ ಮತ್ತಿತರರು ಇದ್ದರು.