ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ:ಮೇ 5ರ ಸಾಯಂಕಾಲ 6ಕ್ಕೆ ಬಹಿರಂಗ ಪ್ರಚಾರ ಅಂತ್ಯ, ಶಾಂತಿಯುತ ಮತದಾನಕ್ಕೆ ಸಹಕರಿಸಿ:ಬಿ.ಫೌಜಿಯಾ ತರನ್ನುಮ್
ಕಲಬುರಗಿ:ಮೇ.3: ಸಾರ್ವತ್ರಿಕ ಲೋಕಸಭಾ ಚುನಾವಾಣೆಗೆ ಇದೇ ಮೇ 7 ರಂದು ಬೆಳಿಗ್ಗೆ 7 ರಿಂದ ಸಾಯಂಕಾಲ 6 ಗಂಟೆ ವರೆಗೂ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾನ ಮುಕ್ತಾಯ ಸಮಯದ ಪೂರ್ವ 48 ಅಂದರೆ ಬಹಿರಂಗ ಪ್ರಚಾರ ಮೇ 5ರ ಸಂಜೆ 6ಕ್ಕೆ ಮುಕ್ತಾಯವಾಗಲಿರುವ ಕಾರಣ ತದನಂತರ ಯಾವುದೇ ರೀತಿಯ ಬಹಿರಂಗ ಸಭೆ-ಸಮಾರಂಭ ಆಯೋಜನೆ, ಪ್ರಚಾರ ಮಾಡುವಂತಿಲ್ಲ. ಶಾಂತಿಯುತ ಮತದಾನಕ್ಕೆ ಎಲ್ಲಾ ರಾಜಕೀಯ ಪಕ್ಷಗಳು, ಮತದಾರರು ಸಹಕರಿಸಬೇಕು ಎಂದು ಗುಲಬರ್ಗಾ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ಶುಕ್ರವಾರ ತಮ್ಮ ಕಚೇರಿಯಲ್ಲಿ ಸಾಮಾನ್ಯ ವೀಕ್ಷಕ ದೀಪನಕರ್ ಸಿನ್ಹಾ ಮತ್ತು ವೆಚ್ಚ ವೀಕ್ಷಕ ಸಿ.ಧರಿನಥ ವಿ.ಎಸ್. ಅವರ ಸಮಕ್ಷಮ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಬಹಿರಂಗ ಪ್ರಚಾರ ಮುಗಿದ ನಂತರ ಗುಲಬರ್ಗಾ ಲೋಕಸಭಾ ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷದ ಪದಾಧಿಕಾರಿಗಳು ಬಹಿರಂಗ ಪ್ರಚಾರ ಅಂತ್ಯವಾದ ಕೂಡಲೆ ಕ್ಷೇತ್ರವನ್ನು ತೊರೆಯಬೇಕು. ಈ ಸಂಬಂಧ ತಮ್ಮ ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ತಿಳಿಸಬೇಕು ಎಂದರು.
ರಾಜಕೀಯ ಪಕ್ಷಗಳ ಮುಖಂಡರಿಗೆ ಮತದಾನದ ಮುಕ್ತಾಯದ ಕೊನೆ 48 ರಿಂದ 72 ಗಂಟೆ ಅವಧಿಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ವಿವರಿಸಿದ ಅವರು, ಮೇ-4ರ ಸಾಯಂಕಾಲ 6 ಗಂಟೆಯಿಂದ ಅನ್ವಯಯವಾಗುವಂತೆ ಯಾವುದೇ ವ್ಯಕ್ತಿ ಡಿ.ಇ.ಓ ಅಥವಾ ಚುನಾವಣಾಧಿಕಾರಿಗಳ ಅನುಮತಿ ಮತ್ತು ದಾಖಲೆ ಇಲ್ಲದೆ 50 ಸಾವಿರ ರೂ. ಮೇಲ್ಪಟ್ಟ ಹಣವಾಗಲಿ ಅಥವಾ 10 ಸಾವಿರ ರೂ. ಮೇಲ್ಪಟ್ಟ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ ಎಂದರು.
ಬಹಿರಂಗ ಪ್ರಚಾರ ಅಂತ್ಯವಾದ ಬಳಿಕ ಬಲ್ಕ್ ಎಸ್.ಎಂ.ಎಸ್., ಧ್ವನಿ ಸಂದೇಶ (ವಾಯ್ಸ್ ಮೆಸೇಜ್) ಒಳಗೊಂಡಂತೆ ಯಾವುದೇ ರೀತಿಯ ವಿದ್ಯುನ್ಮಾನ ಮಾಧ್ಯಮದ ಮೂಲಕ (ಪರ್ವಾನುಮತಿ ಪಡೆದ ಮುದ್ರಣ ಮಾಧ್ಯಮ ಜಾಹೀರಾತು ಹೊರತುಡಿಸಿ) ಪ್ರಚಾರ ಮಾಡುವಂತಿಲ್ಲ. ಧ್ವನಿವರ್ಧಕ ಬಳಕೆ ಸಹ ಕೊನೆಯ 48 ಗಂಟೆಯಲ್ಲಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.
ಕೊನೆಯ 48 ಗಂಟೆ ಹೊರತುಪಡಿಸಿ ಬಹಿರಂಗ ಪ್ರಚಾರಕ್ಕೆ ಯಾವುದೇ ರೀತಿಯ ಧ್ವನಿವರ್ಧಕ, ಕ್ಲಾಥ್ ಬ್ಯಾನರ್ಸ್, ಕ್ಲಥ್ ಫ್ಲ್ಯಾಗ್ಸ್, ಹ್ಯಾಂಡ್ ಬಿಲ್ಸ್, ಪೋಸ್ಟರ್ಸ್, ಸಿ.ಡಿ.ಗಳು, ಚೇರ್, ಟೇಬಲ್, ಪೆಂಡಾಲ್, ಹೆದ್ದಾರಿ ಫಲಕ, ಕಟೌಟ್ಸ್ ಬಳಸಿ ಜಾಹೀರಾತು ಮಾಡಬೇಕಿದಲ್ಲಿ ಚುನಾವಣಾಧಿಕಾರಿ-ಸಹಾಯಕ ಚುನಾವಣಾಧಿಕಾರಿಗಳ ಅನುಮತಿ ಪಡೆಯಬೇಕು. ಮೈಕ್, ಲೌಡ್ ಸ್ಪೀಕರ್, ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆ ವರೆಗೆ ಮಾತ್ರ ಬಳಸಬಹುದು, ರಾತ್ರಿ 10ರ ನಂತರ ಬಳಸುವಂತಿಲ್ಲ.
ಮತದಾನ ಹಾಗೂ ಮತದಾನ ಪೂರ್ವ ದಿನದಂದು ಮದ್ಯ ಮಾರಾಟ ನಿಷೇಧಿಸಿದಲ್ಲದೆ 144 ಜಾರಿ ಮಾಡಿದ್ದು, ಚುನಾವಣಾ ಸಿಬ್ಬಂದಿ ಹೊರತುಪಡಿಸಿ 5ಜನಕ್ಕಿಂತ ಹೆಚ್ಚು ಜನ ತಿರುಗಾಡುವಂತಿಲ್ಲ. ಇನ್ನು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಯಾವುದೇ ವ್ಯಕ್ತಿ ಚುನಾವಣಾ ಉದ್ದೇಶಕ್ಕೆ ಸಾರ್ವಜನಿಕ-ಖಾಸಗಿ ಜಮೀನು, ಕಟ್ಟಡ, ವಾಹನಗಳ ಮೇಲೆ ಫ್ಲ್ಯಾಗ್ ಪೋಸ್ಟ್, ಬ್ಯಾನರ್, ನೋಟಿಸ್ ಮತ್ತು ಸ್ಲೋಗನ್ ಅಂಟಿಸುವಂತಿಲ್ಲ ಮತ್ತು ಸರ್ಕಾರಿ ಆವರಣವನ್ನು ವಿರೂಪಗೊಳಿಸುವಂತಿಲ್ಲ. ಆರ್.ಓ., ಡಿ.ಇ.ಓ ಅನುಮತಿ ಇಲ್ಲದೆ ಯಾವುದೇ ರೀತಿಯ ವಾಹನ ಸಹ ಬಳಸುವಂತಿಲ್ಲ. ಕೊನೆಯ 48 ಗಂಟೆ ಅವಧಿಯಲ್ಲಿ ಓಡಾಟಕ್ಕೆ ಅಭ್ಯರ್ಥಿ, ಎಲೆಕ್ಷನ್ ಏಜೆಂಟ್, ಕಾರ್ಯಕರ್ತರಿಗೆ ಹೀಗೆ ಕೇವಲ 3 ವಾಹನಕ್ಕೆ ಪ್ರತ್ಯೇಕ ಅನುಮತಿ ಪಡೆಯಬೇಕು ಎಂದು ಚುನಾವಣಾಧಿಕಾರಿಗಳು ತಿಳಿಸಿದರು.
ಮತದಾರರ ಮೇಲೆ ಪ್ರಭಾವ ಬೀರುವ ದೂರದರ್ಶನದಲ್ಲಿ ಸಿನಿಮಾಟೋಗ್ರಾಫಿ, ಚರ್ಚೆ, ಸಂವಾದ, ವಿಶ್ಲೇಷಣೆ, ಚುನಾವಣೋತ್ತರ ಸಮೀಕ್ಷೆ, ಹೀಗೆ ಯಾವುದೇ ರೀತಿಯಲ್ಲಿ ಮತಗಟ್ಟೆ ವ್ಯಾಪ್ತಿಯಲ್ಲಿ ಪ್ರಸಾರ ಮಾಡುವುದಾಗಲಿ ಅಥವಾ ಬಿತ್ತರಿಸುವುದನ್ನು ಪ್ರಜಾ ಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್ 126(1)(ಬಿ) ರಂತೆ ನಿರ್ಬಂಧಿಸಲಾಗಿದೆ. ಮತದಾನ ದಿನದಂದು ಮತಗಟ್ಟೆಯ 100 ಮೀಟರ್ ಅಂತರದಲ್ಲಿ ಚುನಾವಣಾ ಪ್ರಚಾರ ಮಾಡುವಂತಿಲ್ಲ. 200 ಮೀಟರ್ ಹೊರಗಡೆ ಅಭ್ಯರ್ಥಿ ಎಲೆಕ್ಷನ್ ಬೂತ್ ಇಟ್ಟುಕೊಳ್ಳಬಹುದು, ಇದಕ್ಕೆ ಅನುಮತಿ ಪಡೆಯಬೇಕು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದರು.
ಇದಲ್ಲದೆ ಪ್ರಜಾ ಪ್ರತಿನಿಧಿ ಕಾಯ್ದೆ-1951ರ ನಿಯಮ 127ಎ ಪ್ರಕಾರ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದ ಪ್ರತಿ ಕರಪತ್ರ, ಪಾಂಪ್ಲೆಟ್ಸ್, ಹ್ಯಾಂಡ್ ಬಿಲ್, ಬಂಟಿಂಗ್, ಬ್ಯಾನರ್, ಫ್ಲೆಕ್ಸ್, ಹೆದ್ದಾರಿ ಫಲಕಗಳ ಮೇಲೆ ಅಂಟಿಸುವ ಯಾವುದೇ ಬ್ಯಾನರ್ ಮುದ್ರಿಸಿದಲ್ಲಿ ಮುದ್ರಕರು ಜಿಲ್ಲಾ ಚುನಾವಣಾಧಿಕಾರಿಗಳು ಮಾಹಿತಿ ನೀಡುವುದು ಕಡ್ಡಾಯವಾಗಿದೆ.
ಮತದಾರರನ್ನು ಕರೆತರುವಂತಿಲ್ಲ: ಮೇ 7 ಮತದಾನ ದಿನದಂದು ರಾಜಕೀಯ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಮತದಾರರನ್ನು ವಾಹನದಲ್ಲಿ ಕೂರಿಸಿಕೊಂಡು ಮತಗಟ್ಟೆಗೆ ತರುವುದಾಗಲಿ ಅಥವಾ ಮತಗಟ್ಟೆಯಿಂದ ಮನೆಗೆ ಬಿಡುವಂತ ಯಾವುದೇ ಸೇವೆ ನೀಡುವಂತಿಲ್ಲ. ಇದನ್ನು ಉಲ್ಲಂಘಿಸಿದಲ್ಲಿ ಎಫ್.ಐ.ಆರ್. ದಾಖಲಿಸಲಾಗುವುದು ಎಂದರು.
ಧಾರ್ಮಿಕ ಸ್ಥಳದಲ್ಲಿ ಪ್ರಚಾರ ಸಲ್ಲ: ಯಾವುದೇ ಕಾರಣಕ್ಕೂ ಧಾರ್ಮಿಕ ಸ್ಥಳವನ್ನು ಪ್ರಚಾರಕ್ಕೆ ಬಳಸಬಾರದು. ಅಲ್ಲದೆ ಜಾತಿ, ಧರ್ಮದ ಮೇಲೆ ಭಾವನಾತ್ಮಕವಾಗಿ ವೋಟು ಕೇಳುವಂತಿಲ್ಲ.
ಕ್ರಿಮಿನಲ್ ಹಿನ್ನೆಲೆ ಪ್ರಚೂರಪಡಿಸಿ: ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಇ.ಸಿ.ಐ ಮಾರ್ಗಸೂಚಿಯಂತೆ ಕನಿಷ್ಠ ಮೂರು ಬಾರಿ ಪತ್ರಿಕೆ ಮತ್ತು ದೂರದರ್ಶನದಲ್ಲಿ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಸಿ-1 ನಮೂನೆಯಲ್ಲಿ ಜಾಹೀರಾತು ನೀಡಿ ಸಿ-4 ನಮೂನೆಯಲ್ಲಿ ಚುನಾವಣಾಧಿಕಾರಿಗೆ ವರದಿ ನೀಡಬೇಕು.
ಸಾಮಾನ್ಯ ವೀಕ್ಷಕ ದೀನಕರ್ ಸಿನ್ಹಾ ಮಾತನಾಡಿ, ಮತದಾನ ದಿನದಂದು ಮಾಕ್ ಪೋಲ್ ಬೆಳಿಗ್ಗೆ 5.30 ಗಂಟೆಗೆ ಆರಂಭವಾಗಲಿರುವ ಕಾರಣ ಆಯಾ ಪಕ್ಷದ ಬೂತ್ ಏಜೆಂಟ್‍ಗಳು ಸಮಯಕ್ಕೆ ಸರಿಯಾಗಿ ಹಾಜರಿರುವಂತೆ ನೋಡಿಕೊಳ್ಳಬೇಕು. ಸ್ಥಳೀಐರಿದ್ದರು ತುಂಬಾ ಅನುಕೂಲ. ಪಿ.ಆರ್.ಓ. ಹೊರತುಪಡಿಸಿ ಯಾರು ಮತಗಟ್ಟೆಗೆ ಮೋಬೈಲ್ ತೆಗೆದುಕೊಂಡು ಹೋಗುವಂತಿಲ್ಲ. ಮತಗಟ್ಟೆಯ 200 ಮೀಟರ್ ಅಂತರದಲ್ಲಿ ಜನ ಗುಂಪಾಗಿ ಸೇರುವುದು ನಿಷೇಧಿಸಲಾಗಿದೆ ಎಂದರು.
ನ್ಯಾಯಸಮ್ಮತ ಚುನಾವಣೆಗೆ ಸಹಕರಿಸಿ: ವೆಚ್ಚ ವೀಕ್ಷಕ ಸಿ.ಧರಿನಾಥ ವಿ.ಎಸ್. ಮಾತನಾಡಿ ಗುಲಬರ್ಗಾ ಲೋಕಸಭೆ ಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯಲು ಎಲ್ಲಾ ರಾಜಕೀಯ ಪಕ್ಷಗಳು ಸಹಕರಿಸಬೇಕೆಂದು ಮನವಿ ಮಾಡಿದರು.
ಮಾಸ್ಟರ್ ಟ್ರೇನರ್ ಡಾ.ಶಶಿಶೇಖರ ರೆಡ್ಡಿ ಅವರು ಮತದಾನ ಪೂರ್ವ 48 ರಿಂದ 72 ಗಂಟೆ ಅವಧಿಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ರಾಜಕೀಯ ಪಕ್ಷಗಳ ಮುಖಂಡರಿಗೆ ಪಿ.ಪಿ.ಟಿ. ಮೂಲಕ ಮಾಹಿತಿ ನೀಡಿದರು.
ಸಭೆಯಲ್ಲಿ ಎಸ್.ಪಿ. ಅಕ್ಷಯ ಹಾಕೈ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಶಂಕರ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.