ಮೇ 7 ರಂದು ನಾವೆಲ್ಲರೂ ಮತದಾನ ಮಾಡೋಣ, ಪ್ರತಿಜ್ಞಾವಿಧಿ ಸ್ವೀಕಾರ
ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೪: ಪ್ರಜಾಪ್ರಭುತ್ವದ ಆಶಯಕ್ಕೆ ಮತದಾನ ಅಡಿಪಾಯವಾಗಿದ್ದು, ನಾವೆಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ಸುಭದ್ರ ಸರ್ಕಾರ ರಚನೆಗೆ ಮತ ಚಲಾಯಿಸೋಣ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಬಿ.ಇಟ್ನಾಳ್ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ವೀಪ್ ಸಮಿತಿ ವತಿಯಿಂದ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ  ಹಮ್ಮಿಕೊಳ್ಳಲಾಗಿದ್ದ ಮೇಣದಬತ್ತಿ ಹಿಡಿದು ಮತದಾನದ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೇ.7 ರಂದು ಪ್ರತಿಯೊಬ್ಬ ಮತದಾರರೂ ತಮ್ಮ ಹಕ್ಕು ಚಲಾಯಿಸುವುದಲ್ಲದೇ, ತಮ್ಮ ನೆರೆ ಹೊರೆಯವರಿಗೂ ಮತ ಚಲಾಯಿಸುವಂತೆ ನೋಡಿಕೊಳ್ಳಬೇಕು. ಈಗಾಗಲೇ ಮತದಾರರ ಜಾಗೃತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಲಾಗಿದೆ. ಮತದಾರರು ಯಾವುದೇ ಅಮಿಷಗಳಿಗೆ ಬಲಿಯಾಗದೇ ಅರ್ಹರಿಗೆ ಮತದಾನ ಮಾಡಬೇಕೆಂದರು.  ಚುನಾವಣಾ ಆಯೋಗವು ಎಲ್ಲಾ ಜಿಲ್ಲೆಗಳಲ್ಲಿ ಮತದಾರರ ಜಾಗೃತಿಗೆ ನಡೆದ ಕಾರ್ಯಕ್ರಮಗಳ ಅಪ್‍ಲೋಡ್‍ಗಾಗಿ ವೆಬ್‍ಸೈಟ್ ಮಾಡಿದ್ದು ಅದರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಸುಮಾರೂ 600 ಕ್ಕೂ ಹೆಚ್ಚು ಸ್ವೀಪ್ ಕಾರ್ಯಕ್ರಮ ಮಾಡಿರುವ ದಾಖಲೆಗಳಿವೆ ಎಂದರು.