ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆ, ರಾಷ್ಟ್ರದ ಅಭಿವೃದ್ಧಿಗೆ ಪೂರಕ
ಕಲಬುರಗಿ:ಮೇ.3: ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಿ, ದೇಶದ ಸಮಸ್ಯೆಗಳ ಬಗ್ಗೆ ಮೇಲಿಂದ ಮೇಲೆ ಬೆಳಕು ಚೆಲ್ಲಿ, ಅದಕ್ಕೆ ಪರಿಹಾರವನ್ನು ಹುಡುಕುವಂತೆ ಮಾಡಿ ಸ್ವಸ್ಥ, ಸಧೃಢ ರಾಷ್ಟ್ರ ನಿರ್ಮಾಣಕ್ಕೆ ‘ಮಾಧ್ಯಮ ರಂಗ’ ತನ್ನದೇ ಆದ ಅದ್ವಿತೀಯ ಕೊಡುಗೆಯನ್ನು ನೀಡುತ್ತಿದೆ. ಅದರ ಕಾರ್ಯಾಚರಣೆಗೆ ಸ್ವಾತಂತ್ರ್ಯತೆ ಮತ್ತು ಸಂವಿಧಾನಾತ್ಮಕವಾಗಿ ನಾಲ್ಕನೇ ರಂಗದ ಸ್ಥಾನಮಾನ ಅಗತ್ಯವಾಗಿದೆ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿರುವ ‘ಶ್ರೀ ವಿವೇಕಾನಂದ ಕೋಚಿಂಗ್ ಸೆಂಟರ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ವಿಶ್ವ ಪತ್ರಿಕಾ ಸ್ವಾತಂತ್ರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಷ್ಟ್ರದ ಹಿತ ಬಂದಾಗ, ನ್ಯಾಯವನ್ನು ಒದಗಿಸಿಕೊಡಲು ಪತ್ರಕರ್ತರಿಗೆ ಧೈರ್ಯ, ನಿರ್ಭೀತಿಯಿಂದ ಬರೆಯಲು ಪೂರಕವಾದ ವಾತಾವರಣ ಅಗತ್ಯ. ಸಮಾಜದ ಒಳಿತಿಗಾಗಿ ಹರಿತವಾದ ಬರವಣಿಗೆಯ ಮೂಲಕ ನ್ಯಾಯವನ್ನು ಒದಗಿಸಿಕೊಟ್ಟು, ಪ್ರಾಣತ್ಯಾಗ ಮಾಡಿದ ಪತ್ರಕರ್ತರನ್ನು ಮರೆಯುವಂತಿಲ್ಲ. ಸಮಾಜ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು, ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ಮಾಡುವ ಮೂಲಕ, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವಲ್ಲಿ ಮಾಧ್ಯಮಗಳು ಮೊದಲಿನಿಂದಲೂ ಕಾರ್ಯನಿರ್ವಹಿಸುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಬಸವರಾಜ ಮಳ್ಳಿ, ಸಮಾಜ ಸೇವಕ ಅಸ್ಲಾಂ ಶೇಖ್, ಶಿಕ್ಷಕರಾದ ಭಾಗ್ಯಶ್ರೀ ಕಲ್ಲೂರ್, ವಿಜಯಲಕ್ಷ್ಮೀ ನಾಲವಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.