ಮೇ 7 ರಂದು ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಿ: ಜಿಲ್ಲಾ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ್
ಕಲಬುರಗಿ:ಮೇ.3: ದೇಶದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಮತದಾನ ಹಕ್ಕು ನೀಡಿರುವುದು ಹೆಮ್ಮೆಯ ವಿಷಯ. ಎಲ್ಲರೂ ತಪ್ಪದೇ ಮೇ 7 ರಂದು ಮತದಾನ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಕರೆ ನೀಡಿದರು.
ಶುಕ್ರವಾರದಂದು ಇ.ಎಸ್.ಐ.ಸಿ. ಮೆಡಿಕಲ್ ಕಾಲೇಜ್‍ನಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ, ಗುಲಬರ್ಗಾ ಮತ್ತು ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ ಕಲಬುರಗಿ ಇವುಗಳ ಸಂಯುಕ್ರಾಶ್ರಯದಲ್ಲಿ ಆಯೋಜಿಸಿದ್ದ ಲೋಕಸಭಾ ಚುನಾವಣೆ ಮತದಾರರ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.
ಬಡವ – ಶ್ರೀಮಂತ ಎನ್ನದೇ ದೇಶದಲ್ಲಿ ಎಲ್ಲರೂ ಸಮಾನ ನಾಗರೀಕರಾಗಿದ್ದು, ಎಲ್ಲರಿಗೂ ಮತ ಹಾಕುವ ಹಕ್ಕು ಪ್ರಾಪ್ತವಾಗಿದೆ. ಅದರಲ್ಲೂ ಮಹಿಳೆಯರಿಗೆ ಮತದಾನದ ಹಕ್ಕು ನೀಡಿರುವುದು ಹೆಮ್ಮೆಯ ವಿಷಯ. ಎಷ್ಟೋ ದೇಶಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡುವಂತೆ ಇನ್ನೂ ಹೋರಾಟಗಳು ನಡೆಯುತ್ತಲೇ ಇವೆ ಎಂದು ಅವರು ಹೇಳಿದರು.
ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳಾದ ನಿಮ್ಮ ಪಾತ್ರ ಬಹಳ ಇದೆ. ಮತಚಲಾಯಿಸುವುದು ಹಕ್ಕು ಮತ್ತು ಕರ್ತವ್ಯವಾಗಿದೆ. ಮರೆಯದೆ ಮತಲಾಯಿಸಿ ಎಂದು ಅವರು ಹೇಳಿದರು.
ಚುನಾವಣೆಯ ಸಾಮಾನ್ಯ ವೀಕ್ಷಕ ದೀಪಾಂಕರ ಸಿನ್ಹಾ ಅವರು ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮ ಉದ್ಫಾಟಿಸಿ ಮಾತನಾಡಿ, ವಿದ್ಯಾರ್ಥಿಗಳಾದ ನೀವು ಭವಿಷ್ಯದ ಪ್ರಜೆಗಳಾಗಿದ್ದು, ಮೇ 7 ರಂದು ಎಲ್ಲರೂ ಮತಚಲಾಯಿಸುವ ಮೂಲಕ ತಮ್ಮ ಜವಾಬ್ದಾರಿ ಮೆರೆಯಬೇಕು ಎಂದು ಹೇಳಿದರು.
ನಗರ ಪೋಲಿಸ್ ಆಯುಕ್ತ ಚೇತನ್ ಆರ್ ಅವರು ಮಾತನಾಡಿ, 18 ವರ್ಷ ವಯಸ್ಸು ಮೇಲ್ಪಟ್ಟ ಯಾರೇ ಆಗಿರಲಿ, ಬಡವರಾಗಿರಲಿ, ಶ್ರೀಮಂತರಾಗಿರಲಿ, ಯಾವುದೇ ಜಾತಿದವರು ಆಗಿರಬಹುದು, ಯಾವುದೇ ಧರ್ಮ ಆಗಿರಬಹುದು, ಎಲ್ಲರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ಹೇಳಿದರು.
ಮೇ. 7 ರಂದು ಎಲ್ಲರಿಗೆ ರಜೆ ನೀಡಲಾಗಿದೆ, ಅಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ರಜೆ ಇದೆ ಎಂದು ಮೋಜು-ಮಸ್ತಿ ಮಾಡಲು ಪ್ರವಾಸಿ ತಾಣಗಳಿಗೆ ಹೋಗಬೇಡಿ ಎಂದು ತಿಳಿಹೇಳಿದರು. ಇ.ಎಸ್.ಐ.ಸಿ. ನರ್ಸಿಂಗ ಕಾಲೇಜಿನ್ ಪ್ರಾಂಶಪಾಲರಾದ ಪ್ರತಿಭಾ ಅವರು ಮಾತನಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ನೋಡಲ್ ಅಧಿಕಾರಿ ಭಂವರ ಸಿಂಗ್ ಮೀನಾ ಅವರು ಮತದಾನ ಪ್ರತಿಜ್ಞಾವಿಧಿ ಬೋಧಿಸಿದರು.
ಇದೇ ಸಂದರ್ಭದಲ್ಲಿ “ನಾ ಭಾರತ್” ಚುನಾವಣಾ ದೃಶ್ಯ ಹಾಡು ಪ್ರದರ್ಶನದ ಹಾಗೂ ಇ.ಎಸ್.ಐ.ಸಿ. ವಿದ್ಯಾರ್ಥಿಗಳಿಂದ ಕಿರು ನಾಟಕ ಪ್ರದರ್ಶನ ನಡೆಯಿತು.
ಇದೇ ಸಂದರ್ಭದಲ್ಲಿ ಚುನಾವಣೆ ಜಾಗೃತಿ ಎಂಬ ಸ್ಪರ್ಧೆಯಲ್ಲಿ ಎಂ.ಬಿ.ಬಿ.ಎಸ್.ಪದವಿಯ 239 ವಿದ್ಯಾರ್ಥಿಗಳಿಗೆ ಭಾಗವಹಿಸಿದ್ದು, ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ದೇವಿದಾಸ್ ಪಾಟೀಲ, ಪ್ರೋಬೇಷನರಿ ಐ.ಎ.ಎಸ್. ಅಧಿಕಾರಿ ಗಜಾನನ ಬಾಳೆ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ರವಿಕಾಂತ ಸ್ವಾಮಿ, ಡೀನ್ ಪ್ರಾಂಶಪಾಲರುಗಳಾದ ಡಾ. ಉಮೇಶÀ ಡಾ. ಅಜಯ ಗುಡೂರು, ಜಿಮ್ಸ್ ವೈದ್ಯಕೀಯ ಅಧೀಕ್ಷ ಶಿವಕುಮಾರ , ಇ.ಎಸ್.ಐ. ಡಾ. ಕ್ಷೀರಸಾಗರ, ಡಾ. ಐವೊನಾ ಲೋಬೋ, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಕಾಲೇಜಿನ ವಿದ್ಯಾರ್ಥಿಗಳು, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.