ಗುಲಬರ್ಗಾ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಸಕಲ ಸಜ್ಜು:20,98,202 ಜನ ಮತದ ಹಕ್ಕು ಹೊಂದಿದ್ದಾರೆ:ಬಿ.ಫೌಜಿಯಾ ತರನ್ನುಮ್
ಕಲಬುರಗಿ:ಮೇ.3:ಸಾರ್ವತ್ರಿಕ ಲೋಕಸಭಾ ಚುನಾವಾಣೆಗೆ ಇದೇ ಮೇ 7 ರಂದು ಬೆಳಿಗ್ಗೆ 7 ರಿಂದ ಸಾಯಂಕಾಲ 6 ಗಂಟೆ ವರೆಗೂ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸರ್ವ ಸನ್ನಧವಾಗಿದೆ. ಗುಲಬರ್ಗಾ ಲೋಕಸಭಾ ಕ್ಷೇತ್ರದಲ್ಲಿ 10,49,959 ಪುರುಷರು, 10,47,961 ಮಹಿಳೆಯರು ಹಾಗೂ 282 ಇತರೆ ಸೇರಿ ಒಟ್ಟು 20,98,202 ಜನ ಮತ ಚಲಾವಣೆ ಹಕ್ಕು ಹೊಂದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಗುಲಬರ್ಗಾ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ಶುಕ್ರವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಮತದಾನಕ್ಕೆ ಕೈಗೊಂಡ ಪೂರ್ವಸಿದ್ಧತೆ ಮತ್ತು ಮತದಾನ ಪೂರ್ವ 48 ರಿಂದ 72 ಗಂಟೆ ಅವಧಿಯ ಎಸ್.ಓ.ಪಿ ಬಗ್ಗೆ ವಿವರಿಸುತ್ತಾ 18-19 ವರ್ಷದ 36,543 ಯುವ ಮತದಾರರಿದ್ದಾರೆ. ಮತಗಟ್ಟೆಗೆ ಬಂದು ಮತ ಚಲಾಯಿಸಲು ಆಗದ 85 ªರ್ಷ ಮೇಲ್ಪಟ್ಟ 1,149 ಜನ ಹಿರಿಯ ನಾಗರಿಕರು ಮತ್ತು 396 ವಿಶೇಷಚೇತನರು ಈಗಾಗಲೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸಿದ್ದಾರೆ ಎಂದರು.
ಕ್ಷೇತ್ರದಾದ್ಯಂತ ಮುಕ್ತ, ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಎಲ್ಲಾ ಪೂರ್ವಸಿದ್ಧತೆ ಕೈಗೊಂಡಿದ್ದು, ಕೇಂದ್ರದ ಪೊಲೀಸ್ ಪಡೆ ಭದ್ರತೆಗೆ ಈಗಾಗಲೆ ಆಗಮಿಸಿದೆ. ಕೊನೆಯ 48 ಗಂಟೆ ಅವಧಿಯಲ್ಲಿ ಈ ಪಡೆ ವಿಧಾನಸಭಾ ಕ್ಷೇತ್ರವಾರು ರೂಟ್ ಮಾರ್ಚ್ ಮಾಡಿ ಮತದಾರರಲ್ಲಿ ಮತದಾನ ಮಾಡುವಂತೆ ಆತ್ಮ ವಿಶ್ವಾಸ ತುಂಬಲಿದೆ ಎಂದರು.
ಕ್ಷೇತ್ರದಾದ್ಯಂತ ನಗರ ಪ್ರದೇಶದಲ್ಲಿ 672 ಮತ್ತು ಗ್ರಾಮಾಂತರ ಪ್ರದೇಶದಲ್ಲಿ 1,494 ಸೇರಿ ಒಟ್ಟು 2,166 ಮತಗಟ್ಟೆ ಸ್ಥಾಪಿಸಲಾಗಿದೆ. ಎಲ್ಲಾ ಮತಗಟ್ಟೆಯಲಿಲ ಕನಿಷ್ಠ ಮೂಲಸೌಕರ್ಯ ಇರಲಿದೆ. ಇದರಲ್ಲಿ 493 ಮತಗಟ್ಟೆ ವಲನರೇಬಲ್ ಮತ್ತು ಕ್ರಿಟಿಕಲ್ ಮತಗಟ್ಟೆ ಎಂದು ಗುರುತಿಸಿದ್ದು, ಇಂತಹ ಮತಗಟ್ಟೆಯಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಜಿಲ್ಲೆಯ 9 ಕ್ಷೇತ್ರಕ್ಕೆ ಒಟ್ಟು 270 ಜನ ಮೈಕ್ರೋ ವೀಕ್ಷಕರನ್ನು ಸಹ ನೇಮಿಸಲಾಗಿದೆ ಎಂದರು.
ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಸಖಿ ಪಿಂಕ್ ಬೂತ್, ತಲಾ ಒಂದು ಯುವ, ಪಿ.ಡಬ್ಲ್ಯೂ.ಡಿ. ಹಾಗೂ ಐತಿಹಾಸಿಕ ಹಿನ್ನೆಲೆ ಒಳಗೊಂಡ ಥೀಮ್ ಬೂತ್ ಸ್ಥಾಪಿಸಿ ಮತದಾರರನ್ನು ಆಕರ್ಷಿಸಲಾಗುತ್ತಿದೆ. ಈ ಬೂತ್‍ಗಳ ಸುಣ್ಣ-ಬಣ್ಣ ಕಾರ್ಯ ಈಗಾಗಲೆ ಭರದಿಂದ ಸಾಗಿದೆ ಎಂದ ಅವರು, ಮತದಾನ ದಿನದಂದು ಚುನಾವಣಾ ಕೆಲಸದಲ್ಲಿನ ಅಧಿಕಾರಿಗಳು ಹೊರತುಪಡಿಸಿ ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಮತದಾರರು ಮೋಬೈಲ್ ತೆಗೆದುಕೊಂಡು ಬರುವಂತಿಲ್ಲ ಎಂದರು.
ಮತ ಎಣಿಕೆ ಗುಲಬರ್ಗಾ ವಿ.ವಿ.ಯಲ್ಲಿ: ಲೋಕಸಭಾ ಕ್ಷೇತ್ರದ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೇಂದ್ರಗಳನ್ನು ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಾಪಿಸಿದೆ. ಈಗಾಗಲೆ ಪಿ.ಆರ್.ಓ, ಎ.ಪಿ.ಆರ್.ಓ. ಗಳಿಗೆ ಎರಡು ಹಂತದ ತರಬೇತಿ ನೀಡಲಾಗಿದೆ. ಮತದಾನ ಮುಕ್ತಾಯದ ನಂತರ ಡಿ-ಮಸ್ಟರಿಂಗ್ ಸೆಂಟರ್ ಮೂಲಕ ಗುಲಬರ್ಗಾ ವಿ.ವಿ.ಯ ವಿವಿಧ ವಿಭಾಗದಲ್ಲಿ ಸ್ಥಾಪಿಸಲಾದ ಸ್ಟ್ರಾಂಗ್ ರೂಂಗಳಿಗೆ ಸೂಕ್ತ ಭದ್ರತೆಯಲ್ಲಿ ಮತಯಂತ್ರ ತಂದು ಸೀಲ್ ಮಾಡಲಾಗುತ್ತದೆ. ಇಲ್ಲಿಯೇ ಜೂನ್ 4 ರಂದು ಮತ ಎಣಿಕೆ ನಡೆಯಲಿದೆ ಎಂದರು.
ಬಿಸಿಲು ತಾಪ ಹೆಚ್ಚು,ಆರೋಗ್ಯ ಕಾಳಜಿ: ಬಿಸಿಲಿನ ತಾಪ ಹೆಚ್ಚಿರುವ ಕಾರಣ ಪ್ರತಿ ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿ ಮತ್ತು ಮತದಾರರ ಆರೋಗ್ಯ ಕಾಳಜಿ ಬಗ್ಗೆ ವಿಶೇಷವಾಗಿ ಗಮನ ವಹಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಓ.ಆರ್.ಎಸ್., ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪ್ರಥಮ ಚಿಕಿತ್ಸಾ ಕಿಟ್ ಇಡಲಾಗಿದ್ದು, ಆಶಾ ಕಾರ್ಯಕರ್ತೆ, ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿರಲಿದ್ದಾರೆ. ನೆರಳಿಗೆ ಸಾಮಿಯಾನ ವ್ಯವಸ್ಥೆ, ವೇಟಿಂಗ್ ರೂಂ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಅರ್ಧ ಗಂಟೆಯಲ್ಲಿ ಅಂಬುಲೆನ್ಸ್ ದೊರೆಯುವಂತೆ ಜಿಲ್ಲೆಯಾದ್ಯಂತ 66 ಅಂಬುಲೆನ್ಸ್ ಗುರುತಿಸಲಾಗಿದ್ದು, ವಾಹನ ಚಾಲಕರ ಮೋಬೈಲ್ ಸಂಖ್ಯೆ ಪಿ.ಆರ್.ಓ.ಗಳಿಗೆ ನೀಡಲಾಗಿದೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ-2, ಸಿ.ಹೆಚ್.ಸಿ ಹಾಗೂ ತಾಲೂಕಾ ಆಸ್ಪತ್ರೆಯಲ್ಲಿ-2 ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ 10 ಹಾಸಿಗೆ ಬಿಸಲಿನ ತಾಪ ಹಿನ್ನಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಮೀಸಲಿರಿಸಿದ್ದು, ಇಲ್ಲಿ 24 ಗಂಟೆ ವೈದ್ಯರು ಇರಲಿದ್ದಾರೆ ಎಂದು ಡಿ.ಚಿ. ಬಿ.ಫೌಜಿಯಾ ತರನ್ನುಮ್ ಮಾಹಿತಿ ನೀಡಿದರು.
3.27 ಕೋಟಿ ರೂ. ಹಣ, 2.27 ಕೋಟಿ ರೂ. ಮೊತ್ತದ ವಸ್ತು ಜಪ್ತಿ: ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಆರಂಭದಿಂದ ಇಲ್ಲಿಯವರೆಗೆ ದಾಖಲೆ ಇಲ್ಲದ 3.27 ಕೋಟಿ ರೂ. ಹಣ ವಶಕ್ಕೆ ಪಡೆಯಲಾಗಿದೆ. 2.27 ಕೋಟಿ ರೂ. ಮೊತ್ತದ ಮದ್ಯ, ಡ್ರಗ್ಸ್, ಬಂಗಾರ, ಬೆಳ್ಳಿ, ಇತರೆ ಫ್ರೀಬೀಸ್ ಜಪ್ತಿ ಮಾಡಲಾಗಿದೆ. ಒಟ್ಟಾರೆ 1,103 ಎಂ.ಸಿ.ಸಿ. ಉಲ್ಲಂಘನೆ ಕಾರಣ ಎಫ್.ಐ.ಆರ್. ದಾಖಲಿಸಲಾಗಿದೆ ಎಂದು ಡಿ.ಸಿ. ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಮಾನ್ಯ ವೀಕ್ಷಕ ದೀಪನಕರ್ ಸಿನ್ಹಾ ಮತ್ತು ವೆಚ್ಚ ವೀಕ್ಷಕ ಸಿ.ಧರಿನಾಥ ವಿ.ಎಸ್., ಎಸ್.ಪಿ. ಅಕ್ಷಯ ಹಾಕೈ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಶಂಕರ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.