ಕೋಟನೂರ್ ಘಟನೆ: ಅನಗತ್ಯ ಆತಂಕ ಬೇಡ:ಸಚಿವ ಪ್ರಿಯಾಂಕ್
ಕಲಬುರಗಿ,ಮೇ 3: ಕೋಟನೂರ್ (ಡಿ) ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 12 ಮಂದಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಹೀಗಾಗಿ, ಘಟನೆಯ ಕುರಿತು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಇಲ್ಲಿನ ಸ್ಟೇಷನ್ ಬಜಾರ್ ಸಮೀಪದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೋಟನೂರ್ (ಡಿ) ಘಟನೆಗೂ ಮುನ್ನ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಪ್ರಕರಣ ಸೇರಿದಂತೆ ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣವನ್ನೂ ಒಳಗೊಂಡಂತೆ ಈಗಾಗಲೇ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ತನಿಖೆಯಿಂದ ಎಲ್ಲವೂ ಹೊರಬರಲಿದೆ ಎಂದರು.
ಘಟನೆಯ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ವೈಯಕ್ತಿಕ ಘಟನೆ ನಡೆದರೂ ಅದನ್ನು ಕಾಂಗ್ರೆಸ್ ಪಕ್ಷಕ್ಕೆ ತಂದುಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಸೋಲಿನ ಭೀತಿಯಿಂದ ಹೀಗೆಲ್ಲಾ ಮಾಡುತ್ತಿದ್ದಾರೆ. ಇಂದಲ್ಲ ನಾಳೆ ಸತ್ಯ ಹೊರಬರಲಿದೆ ಎಂದು ನುಡಿದರು.
ಹುಬ್ಬಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣ ಬೀದಿಗಿಳಿದ ಬಿಜೆಪಿಗರು ಹಾಸನದ ಪೆನ್‍ಡ್ರೈವ್ ಪ್ರಕರಣದ ಕುರಿತು ಮಾತ್ರ ಮಾತನಾಡುತ್ತಿಲ್ಲ. ಮೇಲಾಗಿ, ಪ್ರತಿಭಟನೆಯನ್ನೂ ಮಾಡುತ್ತಿಲ್ಲ. ಇದ್ಯಾವ ನ್ಯಾಯ? ಎಂದು ಪ್ರಶ್ನಿಸಿದ ಪ್ರಿಯಾಂಕ್, ಪೆನ್‍ಡ್ರೈವ್ ಪ್ರಕರಣದಲ್ಲಿ ಸಂತ್ರಸ್ತರಾಗಿರುವ 3000 ಹೆಣ್ಣು ಮಕ್ಕಳ ರಕ್ಷಣೆಗೆ ಸರಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ನವ ಕಲಬುರಗಿಯ ಹೊಸ ಸಂಕಲ್ಪ – ಕಲಬುರಗಿ ನೆಕ್ಸ್ಟ್ ಪ್ರಸ್ತಾಪಿಸಿ ಮಾತನಾಡಿದ ಸಚಿವ ಪ್ರಿಯಾಂಕ್, ಪ್ರಣಾಳಿಕೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೃಷಿ, ಪಶು ಸಂಗೋಪನೆ ಹಾಗೂ ಮೀನುಗಾರಿಕೆ, ಸಮಾಜ ಕಲ್ಯಾಣ, ವಾಣಿಜ್ಯ ಮತ್ತು ಕೈಗಾರಿಕೆ, ಶಿಕ್ಷಣ, ಯುವಜನತೆ, ಅರಣ್ಯ ಮತ್ತು ಪರಿಸರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸ್ತ್ರೀ ಸಮೃದ್ಧಿ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಪ್ರವಾಸೋದ್ಯಮ ಹೀಗೆ ಬಹುತೇಕ ಎಲ್ಲ ಇಲಾಖೆ/ ವಲಯಗಳ ಅಭಿವೃದ್ದಿಗೆ ಕಲಬುರಗಿ ನೆಕ್ಸ್ಟ್‍ನಲ್ಲಿ ಒತ್ತು ನೀಡಲಾಗಿದ್ದು ಸುಂದರ ಹಾಗೂ ಸಮೃದ್ಧ ಕಲಬುರಗಿ ನಿರ್ಮಾಣದ ಗುರಿ ನಮ್ಮದಾಗಿದೆ ಎಂದು ವಿವರಿಸಿದರು.
ಕಲಬುರಗಿಯ ವಾಜಪೇಯಿ ಬಡಾವಣೆಯಲ್ಲಿ ಇಡೀ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ಕೆಎಎಸ್, ಐಎಎಸ್, ಬ್ಯಾಂಕಿಂಗ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಕೇಂದ್ರ ಸ್ಥಾಪಿಸಲಾಗಿದೆ. ಇಷ್ಟರಲ್ಲೇ ಈ ಕೇಂದ್ರ ಉದ್ಘಾಟನೆ ಆಗಲಿದೆ. ಇದರ ಜೊತೆಗೆ, ಬೆಂಗಳೂರಿನಲ್ಲಿ ಇಂತಹ ತರಬೇತಿಗಳಿಗೆ ತೆರಳುವ ಅಭ್ಯರ್ಥಿಗಳ ವಾಸ್ತವ್ಯಕ್ಕಾಗಿ ಕೆಕೆಆರ್‍ಡಿಬಿ ವತಿಯಿಂದ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ ಎಂದರು.
ಕಲಬುರಗಿ ನಗರವನ್ನು ಸ್ಮಾರ್ಟ್ ಸಿಟಿ ಮಾಡುವ ನಿಟ್ಟಿನಲ್ಲಿ ಅಗತ್ಯ ಯೋಜನೆ ರೂಪಿಸಲಾಗುವುದು. ಈ ನಿಟ್ಟಿನಲ್ಲಿ ಕೆಕೆಆರ್‍ಡಿಬಿ ಸಹಕಾರ ಸಹ ಪಡೆಯಲಾಗುವುದು ಎಂದರು.
ಇದೇವೇಳೆ, ಕೆಕೆಆರ್‍ಡಿಬಿ ಅಧ್ಯಕ್ಷ ಅಜಯ್‍ಸಿಂಗ್ ಮಾತನಾಡಿ, ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ರೂ. 5000 ಕೋಟಿ ಘೋಷಣೆಯಾಗಿದೆ. ಅಕ್ಷರ ಆವಿಷ್ಕಾರ, ಆರೋಗ್ಯ ಆವಿಷ್ಕಾರ ಹಾಗೂ ಉದ್ಯೋಗ ಆವಿಷ್ಕಾರ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಒಂಬತ್ತು ತಾಲೂಕು ಕೇಂದ್ರಗಳಲ್ಲಿ ಮಿನಿ ವಿಧಾನಸೌಧ ನಿರ್ಮಿಸಲಾಗಿದೆ. ಇನ್ನೂ ಹತ್ತು ತಾಲೂಕು ಕೇಂದ್ರಗಳಲ್ಲಿ ಮಿನಿ ವಿಧಾನಸೌಧಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದು ವಿವರಿಸಿದರು.
ಇನ್ನು, ಕಲಬುರಗಿ ಸ್ಮಾರ್ಟ್ ಸಿಟಿ ಯೋಜನೆ ರೂಪಿಸಿದ್ದಾದರೆ ಈ ನಿಟ್ಟಿನಲ್ಲಿ ಸರಕಾರದಿಂದ ಅನುದಾನ ಬರುವುದು ತಡವಾದರೆ ಕೆಕೆಆರ್‍ಡಿಬಿ ವತಿಯಿಂದ ಅಗತ್ಯ ನೆರವು ನೀಡಲಾಗುವುದು ಎಂದು ಡಾ.ಅಜಯ್‍ಸಿಂಗ್ ಆಶ್ವಾಸನೆ ನೀಡಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಕೋಟನೂರ್ (ಡಿ) ಘಟನೆಯನ್ನು ಸಂತ್ರಸ್ತ ಕುಟುಂಬದವರ ಒತ್ತಾಯದಂತೆಯೇ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ ಅವರು ಸಿಡಿಗಳ ವಿಶ್ವವಿದ್ಯಾಲಯವನ್ನೇ ಇಟ್ಟುಕೊಂಡಿದ್ದಾರೆ ಎಂದು ಸುರಪುರದ ಬಿಜೆಪಿ ಅಭ್ಯರ್ಥಿ ರಾಜೂಗೌಡ ನೀಡಿರುವ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶರಣಪ್ರಕಾಶ್, ಸಾರ್ವಜನಿಕ ಜೀವನದಲ್ಲಿ ಇರುವವರು ಈ ರೀತಿಯ ಹೇಳಿಕೆಗಳನ್ನು ನೀಡಬಾರದು. ‘ಅವರ ಸಿಡಿ ಇದೆ. ಇವರ ಸಿಡಿ ಇದೆ ‘ ಎನ್ನುವಂತಹ ಹೇಳಿಕೆಗಳಿಂದ ಸಾರ್ವಜನಿಕರು ರಾಜಕಾರಣಿಗಳನ್ನು ಹಗುರವಾಗಿ ನೋಡುತ್ತಾರೆ. ಹಾಗಾಗಿ, ಯಾರೊಬ್ಬರು ಇಂತಹ ಹೇಳಿಕೆ ನೀಡಬಾರದು ಎಂದು ಸಲಹೆ ನೀಡಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಮಧ್ಯೆ ಪ್ರವೇಶಿಸಿ, ಈ ಸಲ ಬಿಜೆಪಿ 200 ಸ್ಥಾನ ಗಳಿಸುವುದು ಕೂಡ ಕಷ್ಟವಿದೆ. ಹಾಗಾಗಿ ಸೋಲಿನ ಆತಂಕದಿಂದ ಪ್ರಧಾನಿ ನರೇಂದ್ರ ಮೋದಿ ಮಂಗಳಸೂತ್ರದ ವಿಚಾರ ಪ್ರಸ್ತಾಪಿಸಿದ್ದಾರೆ. ಅವರ ಹೇಳಿಕೆ ಹತಾಶೆಯಿಂದ ಕೂಡಿದೆ ಎಂದು ವ್ಯಾಖ್ಯಾನಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ವಿಶ್ವನಾಥ ಪಾಟೀಲ್ ಹೆಬ್ಬಾಳ, ವಿಧಾನ ಪರಿಷತ್ ಮಾಜಿ ಸದಸ್ಯ ಶರಣಪ್ಪ ಮಟ್ಟೂರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ಡಾ.ಕಿರಣ ದೇಶಮುಖ, ರಾಜಗೋಪಾಲರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೋಲಿ ಸಮಾಜದ ಸಮಾವೇಶ ನಾಳೆ
ಕೋಲಿ ಸಮಾಜದ ಬೃಹತ್ ಸಮಾವೇಶ ಇದೇ ಮೇ 4ರಂದು ಸಂಜೆ 5ಕ್ಕೆ ಕಲಬುರಗಿಯ ಎನ್.ವಿ. ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ತಿಳಿಸಿದರು.
ಕೋಲಿ ಸಮಾಜಕ್ಕೆ ಬಿಜೆಪಿ ಯಾವುದೇ ಕೊಡುಗೆ ನೀಡಿಲ್ಲ. ಹೀಗಾಗಿ, ಸಮಾಜದಲ್ಲಿ ಬಿಜೆಪಿಯ ವಿರುದ್ಧ ಅಸಮಾಧಾನ ಮನೆ ಮಾಡಿದೆ. ಈ ಮಧ್ಯೆ, ಬಿಜೆಪಿ ವತಿಯಿಂದ ಕಲಬುರಗಿ, ಚಿತ್ತಾಪುರದಲ್ಲಿ ಆಯೋಜಿಸಿದ್ದ ಕೋಲಿ ಸಮಾಜದ ಸಮಾವೇಶಕ್ಕೆ ಸಮಾಜದ ಯಾರೂ ಮನ್ನಣೆ ನೀಡಿಲ್ಲ. ಜನರನ್ನು ಕರೆ ತರಲು ಬಿಜೆಪಿ ವತಿಯಿಂದ ಕಳಿಸಿದ್ದ ವಾಹನಗಳು ಯಾರೂ ಬಾರದ ಕಾರಣಕ್ಕೆ ಖಾಲಿ ಖಾಲಿ ವಾಪಸ್ಸಾಗಿವೆ. ಒಟ್ಟಾರೆ, ಬಿಜೆಪಿ ವಿರುದ್ಧ ನಮ್ಮ ಸಮಾಜದ ಜನರು ತಿರುಗಿಬಿದ್ದಿದ್ದಾರೆ. ಹೀಗಾಗಿ, ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಮೇ 4ರಂದು ಕಲಬುರಗಿ ನಗರದಲ್ಲಿ ಕೋಲಿ ಸಮಾಜದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದರು.