ಔಷಧಿ ಸಸ್ಯಗಳು, ಪೌಷ್ಠಿಕ ಆಹಾರ ವಿತರಣೆ ಹಾಗೂ ರಕ್ತದಾನ ಶಿಬಿರ
ಸಂಜೆವಾಣಿ ವಾರ್ತೆ
ಮಂಡ್ಯ. ಸೆ.22:- ಸಾಮಾಜಿಕ ಸಾಮರಸ್ಯ ಕಾಪಾಡುವ ಕಾಯಕಗಳು ಸಂಘಟನೆಗಳಿಂದ ನಡೆಯಬೇಕಿದೆ ಎಂದು ನಿಫಾ ಸಂಘಟನೆಯ ಜಿಲ್ಲಾಧ್ಯಕ್ಷ ಮಂಗಲ ಎಂ.ಯೋಗೀಶ್ ತಿಳಿಸಿದರು.
ಇಂದು ಮಂಡ್ಯ ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನ್ಯಾಷನಲ್ ಇಂಟಿಗ್ರೇಟೆಡ್ ಫೋರಂ ಆಫ್ ಆರ್ಟಿಸ್ಟ್ ಅಂಡ್ ಆಕ್ವಿವಿಸ್ಟ್ ಸಂಸ್ಥಾನದ ದಿನದ ಅಂಗವಾಗಿ ಜರುಗಿದ ಔಷಧಿ ಸಸ್ಯಗಳು, ಪೌಷ್ಠಿಕ ಆಹಾರ ವಿತರಣೆ ಹಾಗೂ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತದಲ್ಲಿ ಭಾವೈಕ್ಯತೆ ಮೂಡಿಸುವ ಕಾಯಕದಲ್ಲಿ ತಲ್ಲೀನರಾಗಿರುವ ನಿಫಾ ಸಂಘಟನೆಯು ದಮನಿತ ಜನರು, ಕಲಾವಿದರು, ಸಮಾನ ಮನಸ್ಕರೆಲ್ಲರೂ ಸೇರಿ ಸಂವಿಧಾನದ ಆಶಯಗಳನ್ನು ಈಡೇರಿಸುತ್ತಾ ಬಂದಿದೆ. ದೇಶದ 250 ಜಿಲ್ಲೆಗಳಲ್ಲಿ ನಿಫಾ ಸಂಘಟನೆಯು ಕಾರ್ಯನಿರ್ವಹಿಸುತ್ತಿದೆ.
ಭಾರತ ಹಸಿವುಮುಕ್ತ ರಾಷ್ಟ್ರವನ್ನಾಗಿಸಲು ಹಲವು ಉಪಯುಕ್ತ ಕಾರ್ಯಗಳನ್ನು ಹಮ್ಮಿಕೊಂಡು ನೆರವೇರಿಸಲಾಗುತ್ತಾ ಬಂದಿದೆ. ನಿಫಾ ಸಂಘಟನೆಯು ಜನರಲ್ಲಿ ಸಾಮರಸ್ಯ ಮೂಡಿಸುವ ಜೊತೆಗೆ ಸಮಷ್ಠಿ ಪ್ರಜ್ಞೆಯನ್ನು ಬೆಳೆಸುತ್ತದೆ ಎಂದರು.
ಜಾತ್ಯಾತೀತ ಸಮಾಜವಾದಿ ಪ್ರಜಾಪ್ರಭುತ್ವದ ಆಶಯಗಳನ್ನು ಹೊಂದಿ ನಿಫಾ ಸಂಘಟನೆಯು ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪ್ರಸಕ್ತ 25ನೇ ವರ್ಷದ ಸಮಾರಂಭದಲ್ಲಿದ್ದು, ಯಂಗ್ ಇಂಡಿಯಾ ಯುವಜನರನ್ನು ಪ್ರೇರೇಪಿಸಿ ಪ್ರೋತ್ಸಾಹಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಕರ್ನಾಟಕ ಜನಪದ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಗೊರವಾಲೆ ಚಂದ್ರಶೇಖರ್ ಉದ್ಘಾಟಿಸಿ ಮಾತನಾಡಿ ನೊಂದ ಜನರ ಕಣ್ಣೋರೆಸುವ ಕಾಯಕಕ್ಕೆ ಸಂಘಟನೆಗಳು ಮುಂದಾಗಬೇಕಿದೆ. ಸಮಾಜದಲ್ಲಿ ನಿರಕ್ಷರಿಗಳು ದಮನಿತ ಜನರು ಮುಖ್ಯವಾಹಿನಿಗೆ ತರಲು ನಿಫಾ ಸಂಘಟನೆಯು ಮುಂದಾಗಬೇಕಿದೆ ಎಂದು ತಿಳಿಸಿದರು.
ಲೇಖಕಿ ಹೆಚ್.ಎಸ್.ರೋಹಿಣಿ ಮಾತನಾಡಿ, ಲಿಂಗ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಸಮಾನತೆ ಬಯಸುವ ಕಾಯಕವನ್ನು ಸಂಘಟನೆ ನಿಫಾ ಸಂಘಟನೆ ಮಾಡುತ್ತಾ ಇದೆ. ಇದರ ಉದ್ದೇಶಗಳನ್ನು ಅರ್ಥೈಸಿಕೊಂಡು ಕಾರ್ಯಪ್ರವೃತ್ತರಾಗಬೇಕಿದೆ ಎಂದರು.
ನಿಫಾ ಸಂಘಟನೆ ಸಂಚಾಲಕರಾದ ಅರವಿಂದ ಪ್ರಭು ಎಂ.ಎನ್.ಶಿವಕುಮಾರ್ ಆರಾಧ್ಯ, ಧನುಷ್‍ಗೌಡ, ಚೇತನ್‍ಕುಮಾರ್, ಸಂತೆಕಸಲಗೆರೆ ಬಸವರಾಜ್, ಅವಿನಾಶ್, ರವಿ ಇತರರಿದ್ದರು. ಈ ಸಂದರ್ಭದಲ್ಲಿ ಪೌಷ್ಠಿಕ ಆಹಾರ ಮತ್ತು 250 ಔಷಧಿ ಗಿಡಗಳನ್ನು ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳÀಲಾಯಿತು.