ನೌಕರರ ಸಂಕಷ್ಟಕ್ಕೆ ಸ್ಪಂದಿಸಿ: ಮಲ್ಲಿಕಾರ್ಜುನ್
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.22: ತಾಲ್ಲೂಕಿನ ಶಿಕ್ಷಣ ಇಲಾಖೆಯ ನೌಕರರ ಸಂಕಷ್ಟಕ್ಕೆ ತಕ್ಷಣವೇ ಸ್ಪಂದಿಸುವ ಪತ್ತಿನ ಸಹಕಾರ ಸಂಘ ಹೆಮ್ಮರವಾಗಿ ಬೆಳೆಯುತ್ತಿದೆ ಎಂದು ರಾಜ್ಯ ಆರ್.ಟಿ.ಓ ಸಂಘದ ರಾಜ್ಯಾಧ್ಯಕ್ಷ ಹಾಗೂ ಸಮಾಜಸೇವಕ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಶಿಕ್ಷಣ ಇಲಾಖೆ ಪತ್ತಿನ ಸಹಕಾರ ಸಂಘ ಅಂಚಿ ಸಣ್ಣಸ್ವಾಮಿಗೌಡರ ಪ್ರಯತ್ನದ ಫಲದಿಂದಾಗಿ ಹಾಗೂ ಶಿಕ್ಷಕರ ಕಷ್ಟ ಸುಖಗಳಿಗೆ ಸ್ಪಂದಿಸುವ ಉದ್ದೇಶದಿಂದ ಆರಂಭವಾಗಿ ಇಂದು ಬೃಹದಾಕಾರವಾಗಿ ಬೆಳೆಯುತ್ತಿದೆ ನೌಕರರಿಗೆ ತಕ್ಷಣ ಅರ್ಜಿ ಹಾಕಿದ ಕೂಡಲೇ ಎರಡು ಲಕ್ಷದ ವರೆಗೆ ಸಾಲವನ್ನು ಮಂಜೂರು ಮಾಡುವ ಮೂಲಕ ಶಿಕ್ಷಣ ಇಲಾಖೆ ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಕೆಲಸ ಮಾಡುತ್ತಿದೆ ಪತ್ತಿನ ಸಹಕಾರ ಸಂಘಗಳ ನಿರ್ವಹಣೆ ಹಾಗೂ ಸಾಲ ವಸೂಲಾತಿ ಬಹಳ ಕಷ್ಟಕರವಾಗಿದ್ದು ಆದರೂ ಛಲ ಬಿಡದ ವಿಕ್ರಮನಂತೆ ಆಡಳಿತ ಮಂಡಳಿಯು ಎಲ್ಲಾ ಸಾಲಗಾರರಿಂದ ಸಕಾಲಕ್ಕೆ ಸಾಲ ವಸೂಲಿ ಮಾಡಿ ಪ್ರಶಸ್ತಿಗೂ ಸಹ ಭಾಜನವಾಗಿದೆ.
ನೌಕರರ ಜಯದೇಶಗಳನ್ನು ಈಡೇರಿಸುವ ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ನೌಕರರಿಗೆ ನೆರವಾಗಲಿ ಎಂದು ಶುಭ ಕೋರಿದರು.
ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಅಂಚಿ ಸಣ್ಣಸ್ವಾಮಿಗೌಡ ಮಾತನಾಡಿ 250 ರೂಪಾಯಿಯ ಷೇರುಧನದೊಂದಿಗೆ ಆರಂಭವಾದ ನೌಕರರ ಪತ್ತಿನ ಸಹಕಾರ ಸಂಘ ಇಂದು ನಿಮ್ಮೆಲ್ಲರ ಸಹಕಾರದಿಂದ ಬೆಳೆದು ನಿಂತಿದೆ. ನಮ್ಮ ಕಾಲದಲ್ಲಿ ಆರಂಭವಾದ ಹಾಗೂ ನೌಕರರ ಹಿತಾಸಕ್ತಿ ಕಾಪಾಡುವ ಸಂಘಗಳನ್ನು ಇನ್ನು ಮುಂದೆ ಸಮರ್ಥವಾಗಿ ನಿರ್ವಹಣೆ ಮಾಡಿಕೊಂಡು ಹೋಗುವುದು ನಿಮ್ಮ ಹೆಗಲ ಮೇಲಿದೆ. ಸಾಲ ಪಡೆದ ಎಲ್ಲಾ ಶಿಕ್ಷಕರು ಸಕಾಲಕ್ಕೆ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಕಾರಣವಾಗಬೇಕು ಸಂಘಕ್ಕೆ ಒಂದು ಕಟ್ಟಡ ನಿರ್ಮಿಸಬೇಕು ಎಂಬ ಉದ್ದೇಶದಿಂದ ನಿವೇಶನಕ್ಕೆ ಮನವಿ ಮಾಡಲಾಗಿದೆ ನಿವೇಶನ ದೊರೆತ ಕೂಡಲೇ ದಾನಿಗಳ ನೆರವಿನಿಂದ ಕಟ್ಟಡವನ್ನು ನಿರ್ಮಾಣ ಮಾಡಲು ಶ್ರಮಿಸಲಾಗುವುದು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಕೃಷ್ಣರಾಜಪೇಟೆ ಶಿಕ್ಷಣ ಇಲಾಖೆ ನೌಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ.ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಸೀತಾರಾಮು, ಎಂ ಡಿ ಸಿ ಸಿ ಬ್ಯಾಂಕ್ ನ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಸಂಘದ ಉಪಾಧ್ಯಕ್ಷ ಕೋದಂಡರಾಮ ಹಾಗೂ ಪದಾಧಿಕಾರಿಗಳು ಎಲ್ಲಾ ನಿರ್ದೇಶಕರು ಭಾಗವಹಿಸಿದ್ದರು.