ಸಂತಸದ ಜೀವನಕ್ಕೆ ನಿತ್ಯ ಯೋಗ ಅಗತ್ಯ
ಭಾಲ್ಕಿ:ಮೇ.3: ವಿದ್ಯಾರ್ಥಿಗಳು ಖಿನ್ನತೆ ಸೇರಿದಂತೆ ನಕಾರಾತ್ಮಕ ಭಾವನೆಗಳನ್ನು ಓಡಿಸಿ ಸಂತಸದ ಜೀವನ ನಡೆಸಲು ನಿತ್ಯ ಯೋಗ ಒಳಗೊಂಡಂತೆ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಮೈಸೂರಿನ ಮನೋರೋಗ ಚಿಕಿತ್ಸಕಿ ವೇದಪ್ರಧಾ ಹೇಳಿದರು.
ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದಲ್ಲಿ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಜ್ಞಾನಾರ್ಜನೆಯನ್ನು ಆನಂದದಿಂದ ಅನುಭವಿಸದೆ, ಅಂಕಗಳಿಕೆಯ ಒತ್ತಡಕ್ಕೆ ಒಳಗಾಗಿ ಅಂತರ್ ಮುಖಿಗಳು ಆಗುತ್ತಿದ್ದಾರೆ. ಹಾಗಾಗಿ, ನಾನಾ ಮಾನಸಿಕ ಬೇನೆಗಳಿಗೆ ಒಳಗಾಗಿ ಉಜ್ವಲ ಭವಿಷ್ಯಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಜೀವನವನ್ನು ಆನಂದದಿಂದ ಕಳೆಯಲು ಎಲ್ಲರೊಂದಿಗೆ ಮುಕ್ತವಾಗಿ ಬೆರೆಯಬೇಕು.
ಭಾವನೆಗಳನ್ನು ಪರಸ್ಪರ ರೊಂದಿಗೆ ಹಂಚಿಕೊಂಡಾಗ ಮನಸ್ಸು ಹಗುರವಾಗಿ ಸದಾ ಪ್ರಸನ್ನತೆಯಿಂದ ಕೂಡಿರುತ್ತದೆ ಎಂದು ತಿಳಿಸಿದರು.
ಆಡಳಿತಾಧಿಕಾರಿ ಮೋಹನರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣವನ್ನು ಶಿಕ್ಷೆ ಎಂದು ಭಾವಿಸದೆ ಜ್ಞಾನ ಸಂಪಾದನೆಯ ಮೂಲ. ಯಶಸ್ವಿ ಬದುಕಿನ ಕೀಲಿ ಕೈ ಎಂದು ತಿಳಿದುಕೊಳ್ಳಬೇಕು ಎಂದರು.
ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ, ಪ್ರಮುಖರಾದ ಹನ್ಸ್ ತಾಯಿ ಸೇರಿದಂತೆ ಸಿಬ್ಬಂದಿ ಇದ್ದರು.