ಫಯಾಜ್‍ಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ಸಹಿ ಸಂಗ್ರಹಕ್ಕೆ ಎಬಿವಿಪಿ ಕರೆ
ಔರಾದ :ಮೇ.3: ಹುಬ್ಬಳ್ಳಿಯ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಹಾಗೂ ಆರೋಪಿ ಫಯಾಜ್‍ಗೆ ಗಲ್ಲು ಶಿಕ್ಷೆ ನೀಡುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಔರಾದ ಘಟಕದ ವತಿಯಿಂದ ನಗರದಲ್ಲಿ ಸಹಿ ಸಂಗ್ರಹ ಅಭಿಯಾನ ಜರುಗಿತು.
ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಭೀಕರ ಹತ್ಯೆಯನ್ನು ಖಂಡಿಸಿ ಹಾಗೂ ಆರೋಪಿ ಪಯಾಜ್ ನನ್ನು ಗಲ್ಲಿಗೇರಿಸಬೇಕು ಹಾಗೂ ಈ ತನಿಖೆಯನ್ನು ಸಿಬಿಐಗೆ ಹಸ್ತಾಂತರ ಮಾಡಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನಕ್ಕೆ ಕರೆ ನೀಡಲಾಗಿದೆ ಎಂದು ಎಬಿವಿಪಿ ಜಿಲ್ಲಾ ಸಂಚಾಲಕರಾದ ಶಶಿಕಾಂತ ರಾಕಲೆ ಹೇಳಿದರು.
ನೇಹಾ ಹಿರೇಮಠ ಅವರ ಹತ್ಯೆಯಾದ ದಿನದಿಂದ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆಗಳನ್ನ ನೀಡಿತ್ತಿದ್ದರು, ಎಬಿವಿಪಿ ಹಾಗೂ ಇತರ ಸಂಘಟನೆಗಳು ಬೃಹತ್ ಹೋರಾಟ ನಡೆಸಿ ಸರ್ಕಾರದ ಮೇಲೆ ಒತ್ತಡ ತಂದಾಗ ಈ ಪ್ರಕರಣವನ್ನು ತಮ್ಮದೇ ಹಿಡಿತದಲ್ಲಿರುವ ಸಿಐಡಿಗೆ ವಹಿಸಿ ಪ್ರಕರಣವನ್ನು ದಾರಿ ತಪ್ಪಿಸುವ ಕೆಲಸವನ್ನ ರಾಜ್ಯ ಸರ್ಕಾರ ಮಾಡುತ್ತಿರುವುದು ಕಂಡುಬರುತ್ತದೆ. ಈ ಪ್ರಕರಣದ ಹಿಂದೆ ಲವ್ ಜಿಹಾದ್ ನಂತಹ ಷಡ್ಯಂತರ ಇರುವುದು ಗೋಚರವಾಗುತ್ತಿದೆ, ಕಾರಣ ಸರ್ಕಾರ ಈ ಪ್ರಕರಣದ ಹಿಂದೆ ಇರುವ ಜಾಲವನ್ನು ಭೇದಿಸುವ ನಿಟ್ಟಿನಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಗಲ್ಲು ಶಿಕ್ಷೆ ಆಗುವ ರೀತಿಯಲ್ಲಿ ಪ್ರಕರಣವನ್ನು ತೆಗೆದುಕೊಂಡು ಹೋಗುವಂತೆ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನಕ್ಕೆ ಕರೆ ನೀಡಲಾಗಿದೆ. ಸಂಗ್ರಹಿಸಿದ ಸಹಿಗಳನ್ನ ರಾಜ್ಯದ ರಾಜ್ಯಪಾಲರಿಗೆ ಮತ್ತು ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಕ್ರಾ ಪಿಯು ಕಾಲೇಜಿನ ಪ್ರಾಂಶುಪಾಲ ಗಾಜಿಅಲಿ ಬೇಗ, ಎಬಿವಿಪಿ ಪ್ರಮುಖರಾದ ಅಶೋಕ ಶಂಭಳಿ, ಅನಿಲ ಮೇತ್ರೆ, ಸಂಘಟನಾ ಕಾರ್ಯದರ್ಶಿ ಹೇಮಂತ್, ರಾಹುಲ್ ಮಲ್ಲಿಕಾರ್ಜುನ, ನಾಗಮ್ಮ, ಪೂಜಾ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.