ರಾಜ್ಯದಲ್ಲಿ ಕಾಂಗ್ರೆಸ್ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಾರೆ : ಎಚ್.ಎಮ್. ರೇವಣ್ಣ
ವಿಜಯಪುರ, ಮೇ.3:ಗ್ಯಾರಂಟಿ ಯೋಜನೆಗಳು ರಾಜ್ಯದ ಮೂಲೆ-ಮೂಲೆಯ ಪ್ರತಿಯೊಂದು ಸಮಾಜದ ಬಡವರಿಗೆ, ಅಹಿಂದ ವರ್ಗಕ್ಕೆ, ರೈತರಿಗೆ, ಬಿಪಿಎಲ್ ಕುಟುಂಬದವರಿಗೆ ತಲುಪುತ್ತಲಿವೆ. ಇದರಿಂದ ಪ್ರತಿಯೊಂದು ಫಲಾನುಭವಿಯ ಮತವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬರುತ್ತವೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವುದರಲ್ಲಿ ಸಂಶಯವಿಲ್ಲ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಥಮ ಅಧ್ಯಕ್ಷÀ ಎಚ್.ಎಮ್. ರೇವಣ್ಣ ತಿಳಿಸಿದರು.
ನಗರದ ಪಾಟೀಲ ಗಾರ್ಡನ್‍ದಲ್ಲಿ ವಿಜಯಪುರ ಜಿಲ್ಲೆಯ ಹಾಲುಮತ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದ ಮೂಲೆ-ಮೂಲೆಯಲ್ಲಿ ನಮ್ಮ ಸಮಾಜವು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಮತ ನೀಡುತ್ತಾರೆ. ಪ್ರಸಕ್ತ ಲೋಕಸಭಾ ಚುನಾವಣೆಯು ಬಿಜೆಪಿಯ ಸುಳ್ಳಿನ ವಿರುದ್ಧ ಕಾಂಗ್ರೆಸ್ ಪಕ್ಷದ ಸತ್ಯದ ಗ್ಯಾರಂಟಿ ಚುನಾವಣೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇವಲ ನಮ್ಮ ಸಮಾಜದ ನಾಯಕರಾಗಿ ಇಲ್ಲ, ಅಹಿಂದ ವರ್ಗದ ಶಕ್ತಿಯಾಗಿ, ರೈತರ ಬೆನ್ನೆಲುಬಾಗಿ ಇದ್ದಾರೆ. ಅಂತಹವರಿಗೆ ನಾವು ಬೆನ್ನೆಲುಬಾಗಿ ನಿಲ್ಲಬೇಕೆಂದು ಕರೆ ನೀಡಿದರು.
ಪ್ರೊ. ಎಂ.ಜಿ. ಯಂಕಂಚಿ ಮಾತನಾಡಿ, ನಾವೆಲ್ಲರೂ ಈಗಾಗಲೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ನಮ್ಮ ಸಮಾಜಕ್ಕೆ ಸಿಗಬೇಕಾದ ಪ್ರಾತಿನಿಧ್ಯ ಪಕ್ಷದಲ್ಲಿ ಸಿಗುತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಆಲಗೂರ ಮತಯಾಚನೆ ಮಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಸುಮಾರು ವರ್ಷಗಳಿಂದ ನಮ್ಮ ಸಮಾಜದ ಯುವಕರು ಹಾಗೂ ಮುಖಂಡರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂತಹವರಿಗೆ ಅವಕಾಶ ವಂಚಿತರನ್ನು ಗುರುತಿಸಿ ಸರಕಾರದಲ್ಲಿ ಹಾಗೂ ಪಕ್ಷದಲ್ಲಿ ಅವಕಾಶ ದೊರಕಿಸಿ ಕೊಡುವ ಕೆಲಸವನ್ನು ರಾಜ್ಯ ನಾಯಕರು ಮಾಡಬೇಕೆಂದು ರಾಮಣ್ಣ ಮೆಂಡೆಗಾರ ವಕೀಲರು ಹೇಳಿದರು. ಗುರುನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕುರಿಗಾರರಿಗೆ ರಕ್ಷಣೆ ಇಲ್ಲದಂತಾಗಿದೆ, ಅದಕ್ಕಾಗಿ ಸರಕಾರವು ಕುರಿಗಾರರ ರಕ್ಷಣೆಗೆ ನಿಲ್ಲಬೇಕೆಂದು ಸಂಗಮೇಶ ಓಲೆಕಾರ ತಿಳಿಸಿದರು.
ಈ ಸಭೆಯಲ್ಲಿ ಮಲ್ಲಣ್ಣ ಸಾಲಿ, ಬಿ.ಸಿ. ಸಾವುಕಾರ, ಜಟ್ಟೆಪ್ಪ ರವಳಿ, ರಮೇಶ ಭಂಟನೂರ, ಸತೀಶಕುಮಾರ ಅಡವಿ, ಬೀರಪ್ಪ ಜುಮನಾಳ, ಮಲ್ಲಣ್ಣ ಶಿರಶ್ಯಾಡ ಮುಂತಾದವರು ಮಾತನಾಡಿದರು.
ಸಿಂದಗಿಯ ಗ್ಯಾರಂಟಿ ಸಮಿತಿ ಅಧ್ಯಕ್ಷ ಶ್ರೀಶೈಲ ಕವಲಗಿ ಅವರು ಎಚ್.ಎಮ್. ರೇವಣ್ಣರವರನ್ನು ಸನ್ಮಾನಿಸಿದರು.
ವೇದಿಕೆಯ ಮೇಲೆ ಕಾಮೇಶ ಉಕ್ಕಲಿ, ಮಲ್ಲಿಕಾರ್ಜುನ ಮದರಿ, ಬಿ.ಕೆ. ಬಿರಾದಾರ, ಸೋಮನಾಥ ಕಳ್ಳಿಮನಿ, ಗೌರಮ್ಮ ಮುತ್ತತ್ತಿ, ಮೋಹನ ದಳವಾಯಿ, ಸಿದ್ದು ಗೌಡನವರ, ನೀಲಕಂಠ ರೂಗಿ, ರಮೇಶ ಪೂಜಾರಿ, ಮೋಹನ ಮೇಟಿ ಮುಂತಾದವರು ಉಪಸ್ಥಿತರಿದ್ದರು.