ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಪುಣ್ಯದ ಕೆಲಸ : ಚಿಕ್ಕಬಸವಯ್ಯ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.03- ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಒಂದು ಪುಣ್ಯದ ಕೆಲಸವಾಗಿದೆ ಎಂದು ನಿವೃತ್ತ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ ತಿಳಿಸಿದರು.
ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಯೋನಿವೃತ್ತಿ ಹೊಂದಿದ್ದ ಚಿಕ್ಕಬಸವಯ್ಯ ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಆಯೋಜನೆಮಾಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಅಂಬೇಡ್ಕರ್‍ರವರು ಸಂವಿಧಾನ ರಚನೆ ಮಾಡುವ ಜೊತೆಗೆ ದೇಶದ ಸರ್ವಂಗೀಣ ಅಭಿವೃದ್ದಿಯನ್ನು ಬಯಸಿ, ಸರ್ಕಾರ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಬೇಕೆಂಬ ಆಶಯವನ್ನು ಹೊಂದಿದ್ದರು. ಇದರ ಫಲವಾಗಿ ಸಮಾಜ ಕಲ್ಯಾಣ ಮೂಲಕ ಶೋಷಿತ ಸಮುದಾಯಗಳ ಏಳಿಗೆಗೆ ಅನೇಕ ಯೋಜನೆಗಳನ್ನು ಜಾರಿಯಾದವು. ಇಂಥ ಬಹಳಷ್ಟು ಯೋಜನೆಗಳನ್ನು ಶೋಷಿತ ಸಮುದಾಯಗಳಿಗೆ ತಲುಪಿಸಿದ ತೃಪ್ತಿ ಇದೆ. ಈ ಹಿಂದೆ ಇದ್ದ ಬಹಳಷ್ಟು ಯೋಜನೆಗಳು ಈಗ ಕಡಿತಗೊಂಡಿವೆ. ಆಗ ಇದ್ದ ಯೋಜನೆಗಳು ಹಾಗು ಸಲವತುಗಳು ಪರಿಪೂರ್ಣವಾಗಿ ಇಲಾಖೆಯ ಮುಖಾಂತರ ಅರ್ಹ ಫಲಾನುಭವಿಗಳಿಗೆ ತಲುಪಿತ್ತು ಎಂದರು.
ಆದರೆ ಇತ್ತಿಚಿನ ದಿನಗಳಲ್ಲಿ ಇಲಾಖೆಯಲ್ಲಿ ಅನೇಕ ಬದಲಾವಣೆಗಳು ಹಾಗೂ ಯೋಜನೆಗಳು ಕಡಿತಗೊಂಡು ಪರಿಣಾಮ ಸವಾಲಿನ ಕೆಲಸವಾಗಿದೆ. ಹಾಸ್ಟೆಲ್ ನಿರ್ವಹಣೆ ಹಾಗೂ ಮಕ್ಕಳ ಶಿಕ್ಷಣ ಪ್ರಗತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾರ್ಡನ್‍ಗಳ ಪಾತ್ರ ಬಹಳ ಮುಖ್ಯವಾಗಿದೆ. ಕೆಲವು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ರಕ್ಷಣೆಗೆ ಮುಂದಾಗಬೇಕು. ಕೆಲವು ವಿಚಾರಗಳಲ್ಲಿ ಇಲಾಖೆಯ ಅಧಿಕಾರಿಗಳನ್ನು ಹೊಣೆ ಮಾಡಲಾಗುತ್ತದೆ. ಇದನ್ನು ತಪ್ಪಿಸಲು ಸಂಘ ಸಂಸ್ಥೆಗಳ ಸಹಕಾರವನ್ನು ಪಡೆದುಕೊಳ್ಳಬೇಕು. ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ್ ಧ್ಯಕ್ಷತೆ ವಹಿಸಿ ಮಾತನಾಡಿ, ಚಿಕ್ಕಬಸವಯ್ಯ ಅವರ ಸೇವೆ ಅನನ್ಯ. ಇಲಾಖೆಯಲ್ಲಿ ಬಹಳ ಅನುಭವನ್ನು ಹೊಂದಿದ್ದ ಅವರಲ್ಲಿದ್ದ ಸಹನೆ ಹಾಗೂ ತಾಳ್ಮೆ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ. ಇತ್ತಿಚೆಗೆ ನಡೆದ ಸಂವಿಧಾನಜಾಗೃತಿ ಜಾಥಾದಲ್ಲಿ ಅವರು ನಿರ್ವಹಿಸಿದ ಕಾರ್ಯ ಯಶಸ್ಸು ಕಂಡಿತ್ತು. ಹೀಗಾಗಿ ನಮ್ಮ ಜಿಲ್ಲೆಯ ಪ್ರಥಮ ಸ್ಥಾನವನ್ನು ಪಡೆಯಲು ಸಾಧ್ಯವಾಯಿತು. ಇಂಥ ಅಧಿಕಾರಿಗಳು ಹಾಗೂ ನೌಕರರ ಶ್ರಮದ ಫಲ ಜಿಲ್ಲೆಗೆ ಕೀರ್ತಿ ಬಂದಿದೆ ಎಂದರು.
ಇತ್ತಿಚಿನ ದಿನಗಳಲ್ಲಿ ಬರ ಅವರಿಸಿದೆ. ನೀರಿಗಾಗಿ ಹಾಹಾಕಾರ ಉಂಟಾಗಿದೆ. ಹಾಸ್ಟೆಲ್‍ಗಳಿಗೆ ನೀರು ಕೇಳಿಕೊಂಡು ಬಂದರೆ ಅವರಿಗೆ ನಿಲಯ ಪಾಲಕರು ಸಹಾಯ ಮಾಡಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಚಿಕ್ಕಬಸಯ್ಯ ಅವರನ್ನು ಇಲಾಖೆಯ ಪರವಾಗಿ ನೌಕರರರು ಚಿನ್ನದ ಸರ ನೆನಪಿನ ಕಾಣಿಕೆ ನೀಡಿ, ಶಾಲುಹೊದಿಸಿ ಅಭಿನಂದಿಸಿ, ಅತ್ಮೀಯವಾಗಿ ಬಿಳ್ಕೋಟ್ಟರು. ದಲಿತಪರ ಸಂಘಟನೆಗಳ ಮುಖಂಡರು ಸನ್ಮಾನಿಸಿ ಚಿಕ್ಕ ಬಸವಯ್ಯ ಅವರ ಗುಣ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪರಿಶಿಷ್ಟ ಪಂಗಡಗಳ ಇಲಾಖೆಯ ಉಪ ನಿರ್ದೇಶಕಿ ಮಂಜುಳಾ, ಪೌರಾಯುಕ್ತ ರಾಮದಾಸ್, ತಾ.ಪಂ. ಇಓ ಕೃಷ್ಣಪ್ಪ, ಗುಂಡ್ಲುಪೇಟೆಯ ಸಹಾಯಕ ನಿರ್ದೇಶಕ ಮೋಹನ್‍ಕುಮಾರ್, ಯಳಂದೂರು ರಾಜೇಶ್, ದಲಿತ ಸಂಘಟನೆಗಳ ಮುಖಂಡರಾದ ಬಸವನಪುರ ರಾಜಶೇಖರ್, ಅರಕಲವಾಡಿ ನಾಗೇಂದ್ರ, ಕೆ.ಎಂ. ನಾಗರಾಜು, ಸಿ.ಎಂ. ಶಿವಣ್ಣ, ಸಿ.ಎಂ. ಕೃಷ್ಣಮೂರ್ತಿ, ಬ್ಯಾಡಮೂಡ್ಲು ಬಸವಣ್ಣ, ಆಲೂರು ನಾಗೇಂದ್ರ, ಹಾಗೂ ಜಿಲ್ಲೆಯ ತಾಲೂಕು ವ್ಯಾಪ್ತಿಯ ನಿಲಯ ಪಾಲಕರು, ಅಧಿಕಾರಿಗಳು ಮತ್ತು ನೌಕರರರು ಇದ್ದರು.