ಕೊಲೆ ಪ್ರಕರಣದ ನ್ಯಾಯಯುತ ತನಿಖೆಗೆ ಆರ್ಯ ಈಡಿಗರ ಸಂಘ ಒತ್ತಾಯ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.03: ತಾಲೂಕಿನ ಕಿಕ್ಕೇರಿ ಹೋಬಳಿಯ ಚೌಡೇನಹಳ್ಳಿ ಗ್ರಾಮದ ಬಾರ್ ಬೆಂಡರ್ ರಾಮೇಗೌಡರ(48) ಶವ ಕೊಲೆಯಾದ ಸ್ಥಿತಿಯಲ್ಲಿ ಕೃಷ್ಣಾಪುರ ಗ್ರಾಮದ ಬಳಿಯಿರುವ ಸುರವರ್ಧಕ ಬಾರ್ ಬಾಗಿಲಿನಲ್ಲಿಯೇ ದೊರಕಿದ್ದು ಕೊಲೆ ಪ್ರಕರಣದ ನ್ಯಾಯಯುತ ತನಿಖೆಗೆ ತಾಲೂಕು ಆರ್ಯ ಈಡಿಗರ ಸಂಘ ಒತ್ತಾಯಿಸಿದೆ.
ತಾಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ನಂಜುಂಡಪ್ಪ ನೇತೃತ್ವದಲ್ಲಿ ಪಟ್ಟಣದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಚೌಡೇನಹಳ್ಳಿ ಗ್ರಾಮಸ್ಥರು ಪೆÇಲೀಸರ ತನಿಖೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ರೈತಸಂಘದ ಮಾಜಿ ಕಾರ್ಯದರ್ಶಿ ಹಾಗೂ ಈಡಿಗ ಸಮುದಾಯದ ಮುಖಂಡ ಚೌಡೇನಹಳ್ಳಿ ನಾರಾಯಣಸ್ವಾಮಿ ಏಪ್ರಿಲ್ 29 ರ ಸಂಜೆ 05 ಘಂಟೆಯ ವೇಳೆಯಲ್ಲಿ ರಾಮೇಗೌಡರ ಶವ ಸುರವರ್ಧಕ ಬಾರ್ ನ ಬಾಗಿಲಿನಲ್ಲಿಯೇ ಕಂಡುಬಂದಿದೆ. ಶವದ ಮೈಮೇಲೆ ತೀವ್ರ ಸ್ವರೂಪದ ಗಾಯಗಳು ಕಂಡು ಬಂದಿದ್ದು ತಲೆಯ ಹಿಂಭಾಗದಲ್ಲಿಯೂ ಗಾಯವಾಗಿದೆ. ಮೇಲುನೋಟಕ್ಕೆ ಇದೊಂದು ಕೊಲೆಯಂತೆ ಕಂಡು ಬಂದಿದ್ದು ಪ್ರಕರಣದ ಗಂಭೀರ ತನಿಖೆಯಾಗಬೇಕು. ಕೊಲೆಯಾಗಿರಬಹುದಾದ ರಾಮೇಗೌಡರ ಶವವನ್ನು ಪೆÇಲೀಸರು ಮೃತರ ಪತ್ನಿ ನಾಗರತ್ನಮ್ಮ ಹಾಗೂ ನೆರೆದಿದ್ದ ಜನ ಸಮೂಹವನ್ನು ಬೆದರಿಸಿ ದಬ್ಬಾಳಿಕೆಯಿಂದ ಸ್ಥಳದಿಂದ ತೆಗೆದುಕೊಂಡು ಹೋಗಿದ್ದಾರೆ. ಸುರವರ್ಧಕ ಬಾರ್ ಮಾಲೀಕ ಪ್ರಭಾವಿಯಾಗಿದ್ದು ಬಾರ್ ಮಾಲೀಕನ ಒತ್ತಡಕ್ಕೆ ಪೆÇಲೀಸರು ಒಳಗಾಗಿರುವ ಶಂಕೆ ನಮ್ಮನ್ನು ಕಾಡುತ್ತಿದೆ. ಬಾರ್ ಮಾಲೀಕನಿಂದಲೇ ಕೃತ್ಯ ನಡೆದಿರಬಹುದೆಂದು ಮೃತ ರಾಮೇಗೌಡರ ಪತ್ನಿ ನಾಗರತ್ನಮ್ಮ ಕಿಕ್ಕೇರಿ ಪೆÇಲೀಸರಿಗೆ ದೂರು ನೀಡಿದ್ದರೂ ಇದುವರೆಗೂ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಬಾರ್ ನಲ್ಲಿ ಕಲಬೆರಕೆ ಮದ್ಯ ಕುಡಿದು ರಾಮೇಗೌಡ ಮೃತಪಟ್ಟಿದ್ದರೆ ಅದರ ಬಗ್ಗೆಯಾದರೂ ತನಿಖೆಯಾಗಬೇಕಲ್ಲವೆ? ಎಂದು ಪ್ರಶ್ನಿಸಿರುವ ನಾರಾಯಣಸ್ವಾಮಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತದೆ. ಆದರೆ ಬಡವರು ಕೊಲೆಯಾದಾಗ ಮಾತ್ರ ಯಾವುದೇ ಸಾಮಾಜಿಕ ನ್ಯಾಯ ದೊರಕುತ್ತಿಲ್ಲ. ಬಾರ್ ಬಾಗಿಲಿನಲ್ಲಿಯೇ ರಾಮೇಗೌಡರ ಶವ ತೀವ್ರ ಸ್ವರೂಪದ ಗಾಯಗಳಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಬಾರ್ ಮಾಲೀಕನನ್ನು ಬಂಧಿಸಿ ವಿಚಾರಣೆ ನಡೆಸಬೇಕು. ಒಂದು ವೇಳೆ ಕಲಬೆರಕೆ ಮದ್ಯ ಸೇವನೆಯಿಂದ ವ್ಯಕ್ತಿ ಮೃತಪಟ್ಟಿದ್ದರೆ ಕಲಬೆರಕೆ ಮದ್ಯ ಪೂರೈಕೆ ಮಾಡಿದ ಬಾರ್ ಲೈಸೆನ್ಸ್ ರದ್ದುಪಡಿಸಿ ಮಾಲೀಕನ ಮೇಲೆ ಕ್ರಮ ಜರುಗಿಸಬೇಕು. ಸುರವರ್ಧಕ ಬಾರ್ ನಿಯಮಾವಳಿಗಳನ್ನು ಮೀರಿ ನಡೆಯುತ್ತಿದೆ. ಬಾರ್ ಚನ್ನರಾಯಪಟ್ಟಣ ಮುಖ್ಯ ರಸ್ತೆಯಲ್ಲಿದ್ದು ಬಾರ್ ಮುಂದೆ ದೀಪದ ವ್ಯವಸ್ಥೆಯೂ ಇಲ್ಲ. ಬಾರ್‍ನ ಸಿ.ಸಿ.ಟಿ.ವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ರಾಮೇಗೌಡರ ಕೊಲೆ ಪ್ರಕರಣದ ನ್ಯಾಯಯುತ ತನಿಖೆಯಾಗಬೇಕು. ಇಲ್ಲದಿದ್ದರೆ ಆರ್ಯ ಈಡಿಗ ಸಮುದಾಯ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆಂದು ನಾರಾಯಣಸ್ವಾಮಿ ಎಚ್ಚರಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ರಾಮೇಗೌಡರ ಪತ್ನಿ ನಾಗರತ್ನಮ್ಮ, ರೇಣುಕಾಂಬ ಟ್ರಸ್ಟ್ ಅಧ್ಯಕ್ಷ ವೆಂಕಟಾಚಲ, ಮುಖಂಡರುಗಳಾದ ಚೌಡೇನಹಳ್ಳಿ ಮೂರ್ತಿ, ಶಂಕರ, ಸಿ.ಕೆ.ರವಿ, ಪ್ರಕಾಶ್, ನಾಗಣ್ಣ ಸೇರಿದಂತೆ ಹಲವರು ಮಾತನಾಡಿದರು.