ಜಿಲ್ಲೆಯಲ್ಲಿ ನಿರಂತರವಾಗಿ ಬಿಸಿಲಿನ ಪ್ರಮಾಣ ಏರಿಕೆ:ಆರೋಗ್ಯ ಇಲಾಖೆಯಿಂದ ನೀಡಲಾದ ಕೆಲವು ಸಲಹೆಗಳು
ಕಲಬುರಗಿ:ಮೇ.2:ಕಲಬುರಗಿ ಜಿಲ್ಲೆಯಲ್ಲಿ ನಿರಂತರವಾಗಿ ಬಿಸಿಲಿನ ಪ್ರಮಾಣವು ಏರಿಕೆಯಾಗುತ್ತಿದ್ದು, ಮುಂದಿನ 5 ದಿನಗಳ ಕಾಲ ಬಿಸಿ ಗಾಳಿಯೂ ಕೂಡಾ ಬೀಸಲಿದೆ. ಆದ್ದರಿಂದ ಜಿಲ್ಲೆಯ ಸಾರ್ವಜನಿಕರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಬೆಳಗಿನ ಅವಧಿಯಲ್ಲಿ ಮುಗಿಸಿಕೊಂಡು ಬಿಸಿಲಿನ ಸಮಯದಲ್ಲಿ ಮನೆಯಲ್ಲಿಯೇ ಇರಬೇಕು. ತಮ್ಮ ಉಳಿದ ಕೆಲಸಗಳನ್ನು ಸಂಜೆ ಹೊತ್ತಿನಲ್ಲಿ ಮುಗಿಸಿಕೊಳ್ಳಬೇಕೆಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ರತಿಕಾಂತ ಸ್ವಾಮಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪ್ರಸ್ತುತ ಹಾಗೂ ಮುಂಬರುವ ಬೇಸಿಗೆ ದಿನಗಳಲ್ಲಿ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೀಟ್ ವೇವ್ (ಶಾಖದ ಹೊಡೆತ) ಹೀಟ್ ವೇವ್ ಸ್ಟೋಕ್‍ನಿಂದಾಗಿ ಸಾರ್ವಜನಿಕರಿಗೆ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುವ ಸಾಧ್ಯತೆಯಿದ್ದು, ಸಾರ್ವಜನಿಕರಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನೀಡಲಾದ ಈ ಕೆಳಕಂಡ ಸಲಹೆಗಳನ್ನು ಅನುಸರಿಸಬೇಕೆಂದು ಡಿ.ಹೆಚ್.ಓ. ಅವರು ಮನವಿ ಮಾಡಿದ್ದಾರೆ.
ಸಾರ್ವಜನಿಕರು ವಿಶೇಷವಾಗಿ ಪ್ರತಿದಿನ ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಬೇಕು. ಹೆಚ್ಚಾಗಿ ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರು ಕುಡಿಯಬೇಕು. ಸಾರ್ವಜನಿಕರು ಬಿಸಿಲು ದಿನಗಳಲ್ಲಿ ಕೊಡೆ/ಛತ್ರಿ ಬಳಸುವುದರ ಮೂಲಕ ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಉಳಿಯಲು ಪ್ರಯತ್ನಿಸಬೇಕು. ಹಗುರವಾದ ತಿಳಿ ಬಣ್ಣದ, ಸಡಿಲವಾದ ಹತ್ತಿಯ ಬಟ್ಟೆಯನ್ನು ಧರಿಸಬೇಕು.
ಪ್ರಯಾಣಿಕರು ತಮ್ಮ ಜೊತೆಯಲ್ಲಿ ತಪ್ಪದೇ ನೀರು ತೆಗೆದುಕೊಂಡು ಹೋಗಬೇಕು: ಪ್ರಯಾಣಿಕರು ಪ್ರಯಾಣಿಸುವಾಗ ತಮ್ಮೊಂದಿಗೆ ತಪ್ಪದೆ ನೀರನ್ನು ತೆಗೆದುಕೊಂಡು ಹೋಗಬೇಕು. ತೆಳವಾದ ಹತ್ತಿ ಬಟ್ಟೆಯನ್ನು ಧರಿಸಬೇಕೆಂದು ಅವರು ತಿಳಿಸಿದ್ದಾರೆ.