ನಗುವಿನಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ
ಕಲಬುರಗಿ:ಮೇ.2: ನಗುವದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯಘಾತವಾಗುವ ಸಂಭವನೀಯತೆ ಕಡಿಮೆಯಾಗುತ್ತದೆ. ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಮಾನಸಿಕವಾಗಿ ನೆಮ್ಮದಿ, ವ್ಯಕ್ತಿಯ ಆಯಸ್ಸು ಹೆಚ್ಚಾಗುತ್ತದೆ ಎಂದು ಖ್ಯಾತ ಹಾಸ್ಯ ಕಲಾವಿದ ರಾಜು ಹೆಬ್ಬಾಳ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ‘ವಿಶ್ವ ನಗುವಿನ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬವಿದ್ದ ಕಾರಣ ಮನೆಯಲ್ಲಿರುವ ಹಿರಿಯರಾದ ಅಜ್ಜ ಹಾಗೂ ಅಜ್ಜಿ ಮಕ್ಕಳು, ಮೊಮ್ಮಕ್ಕಳಿಗೆ ಬಾಲ್ಯದಿಂದಲೇ ಅನೇಕ ಹಾಸ್ಯ ನೀತಿ ಕಥೆಗಳನ್ನು ಹೇಳುವದರಿಂದ ಆರಂಭದಿಂದಲೇ ಹಾಸ್ಯ ಪ್ರವೃತ್ತಿ ಬೆಳೆಯುತ್ತಿತ್ತು. ಆದರೆ ಈಗ ಇದೆಲ್ಲವೂ ಮಾಯವಾಗಿದೆಯೆಂದು ಕಳವಳ ವ್ಯಕ್ತಪಡಿಸಿದರು.
ನ್ಯಾಯವಾದಿ, ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಇಂದಿನ ಆಧುನಿಕ ಒತ್ತಡದ ಕಾಲದಲ್ಲಿ ಬದುಕುತ್ತಿರುವ ಸಂದರ್ಭದಲ್ಲಿ ನಮ್ಮಲ್ಲಿರುವ ನಗು ಮಾಯವಾಗಿ, ಅಶಾಂತಿಯನ್ನು ಎದುರಿಸುತ್ತಿದ್ದೇವೆ. ಜೀವನದಲ್ಲಿರುವ ಬರುವ ಸುಖ-ದುಖಃಗಳನ್ನು ಸಮಾನವಾಗಿ ಸ್ವೀಕರಿಸಬೇಕು. ‘ಹಸನ್ಮುಖಿ ಸದಾಸುಖಿ’ ಎಂಬ ತತ್ವವನ್ನು ಅಳವಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಗುವಿವಿ ಫೈನ್ ಆಟ್ರ್ಸ್ ವಿಭಾಗದ ಅತಿಥಿ ಉಪನ್ಯಾಸಕ ಡಾ.ರೆಹಮಾನ ಪಟೇಲ್, ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಚಿತ್ರಕಲಾವಿದೆ ರಂಜನಿ ತಳವಾರ, ಕಂಪ್ಯೂಟರ ಶಿಕ್ಷಕಿ ನಿಲೊಫರ್ ಶೇಖ್ ಹಾಗೂ ವಿದ್ಯಾರ್ಥಿಗಳಿದ್ದರು.