ಕರ್ನಾಟಕ ತುಳಿಯುತ್ತಿರುವ ಮೋದಿ: ಮಲ್ಲಿಕಾರ್ಜುನ ಖರ್ಗೆ
ಜೇವರಗಿ,ಮೇ.2: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಮತ್ತು ಕಲಬುರಗಿಯಲ್ಲಿ ಯಾವುದೇ ಅಭಿವೃದ್ಧಿ ಆಗಬಾರದು ಎಂದು ತುಳಿದುಕೊಂಡು ಹೋಗುತ್ತಿದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪಾದಿಸಿದರು.
ಜೇವರಗಿಯಲ್ಲಿ ಬುಧವಾರ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ಮೋದಿ ಅವರು ಸುಳ್ಳಿನ ಸರ್ದಾರ. ಇಂತಹವರಿಗೆ ಮತ ಹಾಕಿ ಮತವನ್ನು ಕೆಡಿಸಿಕೊಂಡರೆ ಪ್ರಜಾಪ್ರಭುತ್ವ ಹಾಳಾಗುತ್ತದೆ. ಸಂವಿಧಾನ ಉಳಿಯುವುದಿಲ್ಲ. ಕೆಲಸ ಮಾಡುವವರನ್ನು ನೋಡಿ ಮತಹಾಕಿ’ ಎಂದು ಕೋರಿದರು.
‘ವಿವೇಕ ಇಲ್ಲದವರು ಕಲಬುರಗಿಯಿಂದ ನೇರವಾಗಿ ರೈಲು ಓಡಿಸಲಿಲ್ಲ ಎನ್ನುತ್ತಿದ್ದಾರೆ. ಸೋಲಾಪುರ ವಿಭಾಗದಿಂದ ರೈಲು ಓಡಿಸಿದರೆ ಗಾಣಗಾಪುರಕ್ಕೂ ಸಂಪರ್ಕ ಸಿಗುತ್ತದೆ. ಕಲಬುರಗಿಯಲ್ಲಿ ನೀರು ಇಲ್ಲದ ಕಾರಣಕ್ಕೆ ಸೋಲಾಪುರದಿಂದ ಹಲವು ರೈಲುಗಳು ಬಿಡಬೇಕಾಯಿತು’ ಎಂದರು.
ಕರ್ನಾಟಕದಲ್ಲಿ ಜಾರಿಯಾಗಿರುವ ಜನರ ಮನೆಮನ ತಲುಪಿರುವಂತಹ ಶಕ್ತಿ ,ಅನ್ನಭಾಗ್ಯ,ಯುವನಿಧಿ,ಗೃಹಜ್ಯೋತಿ,ಗೃಹಲಕ್ಷ್ಮಿ ಎಂಬ ಪಂಚ ಗ್ಯಾರಂಟಿಗಳೇ ನಮ್ಮನ್ನು ಗೆಲುವಿನ ದಡ ತಲುಪಿಸುವ ಅಂಬಿಗರು ಎಂದರು.ಲೋಕಸಭೆಯಲ್ಲಿಯೂ ನಾರಿನ್ಯಾಯ,ಯುವ ನ್ಯಾಯ,ಶ್ರಮಿಕ್, ಕಿಸಾನ್ ನ್ಯಾಯ ಎಂದು ಗ್ಯಾರಂಟಿ ಯೋಜನೆ ಘೋಷಿಸಿದ್ದೇವೆ.ನಮ್ಮ ಪ್ರನಾಳಿಕೆ ನಿಮ್ಮ ಮುಂದಿದೆ,ಸರಿಯಾಗಿ ವಿಷಯ ತಿಳಿದು ಮತ ಹಾಕಿರಿ ಎಂದರು.
ಜನರ ಉದ್ಧಾರಕ್ಕೆ ಮೋದಿ ಪ್ರಧಾನಿ ಆಗಿಲ್ಲ.ಸಂಘಪರಿವಾರಕ್ಕೆ,ಸಿರಿವಂತರಿಗೆ ಉದ್ಧಾರ ಮಾಡಲು ಆದ ಪ್ರಧಾನಿ ಈಗ ಭಾಯ್ ಬಹಿನೋ ಬಿಟ್ಟು ಮೇರೇ ಪರಿವಾರ್ ಅಂತ ಶುರು ಮಾಡ್ಯಾನ ಎಂದು ಮೋದಿ ಅವರಿಗೆ ಏಕ ವಚನದಲ್ಲಿ ಟೀಕಿಸಿದರು.
ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ,ಸಚಿವರಾದ ಶರಣಬಸಪ್ಪ ದರ್ಶನಾಪುರ, ಪ್ರಿಯಾಂಕ್ ಖರ್ಗೆ, ರಾಜ್ಯಸಭೆ ಮಾಜಿ ಸದಸ್ಯ ಎಲ್. ಹನಮಂತಯ್ಯ, ಕೆಕೆಆರ್‍ಡಿಬಿ ಅಧ್ಯಕ್ಷ ಡಾ. ಅಜಯ್‍ಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಅಶೋಕ ಮನಗೂಳಿ, ಲಕ್ಷ್ಮಣ ಸವದಿ, ಎಂ.ವೈ. ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ಬಾಬುರಾವ್ ಚಿಂಚನಸೂರ್, ಮಾಲೀಕಯ್ಯ ಗುತ್ತೇದಾರ್, ರೇವುನಾಯಕ ಬೆಳಮಗಿ, ಜಗದೇವ ಗುತ್ತೇದಾರ, ಸಿದ್ದಲಿಂಗರೆಡ್ಡಿ, ರುಕುಂ ಪಟೇಲ್ ಉಪಸ್ಥಿತರಿದ್ದರು.