ಹಲ್ಲೆ ಖಂಡಿಸಿ ರಸ್ತೆ ತಡೆ, ಪ್ರತಿಭಟನೆ
ಕಲಬುರಗಿ,ಮೇ.2-ಕೋಟನೂರ (ಡಿ) ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಅಪಮಾನ ಮಾಡಿದ ಆರೋಪಿಯ ಕುಟುಂಬದವರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಹಡಗಿಲ್ ಹಾರುತಿ, ಕಣ್ಣಿ ಮತ್ತು ಶರಣಸಿರಸಗಿ ಗ್ರಾಮದ ಲಿಂಗಾಯತ ಸಮುದಾಯದವರು ಹಡಿಗಿಲ್ ಕ್ರಾಸ್ ಬಳಿ ಇಂದು ರಸ್ತೆ ತಡೆ ನಡೆಸಿದರು.
ನಡು ರಸ್ತೆಯಲ್ಲಿ ಟೈಯರ್‍ಗೆ ಬೆಂಕಿ ಹಚ್ಚಿ ಹಲ್ಲೆ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆ
ನಗರದ ಕೋಟನೂರ್ (ಡಿ) ಗ್ರಾಮದ ವೀರಶೈವ ಲಿಂಗಾಯತ ಸಮಾಜದ ಸಂಗಮೇಶ ಅವರ ಕುಟುಂಬದವರ ಮೇಲೆ ಮಂಗಳವಾರ ತಡರಾತ್ರಿ ಕೆಲವು ಕಿಡಿಗೇಡಿಗಳು ಹಲ್ಲೆ ಮಾಡಿರುವುದನ್ನು ಖಂಡಿಸಿ ಚೌವದಾಪುರಿ ಮಠದ ಶ್ರೀಗಳ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರು ನಗರದ ಆಳಂದ್ ಚೆಕ್‍ಪೋಸ್ಟ್ ಬಳಿ ಇಂದು ಮಾನವ ಸರಪಳಿ ರಚಿಸಿ, ಟೈಯರ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಶಿವಕಾಂತ್ ಮಹಾಜನ್, ಅರುಣಕುಮಾರ ಪಾಟೀಲ, ಶರಣು ಮೋದಿ, ಲಕ್ಷ್ಮಿಕಾಂತ ಸ್ವಾದಿ, ಸಚಿನ್ ಕಡಗಂಚಿ, ಸಿದ್ದರಾಜು ಬಿರೆದಾರ, ಮಲ್ಲಿಕಾರ್ಜುನ ಸರವಾಡ, ಮಹೇಶ್ ಕೆಂಭಾವಿ, ದಯಾನಂದ ಯಂಕಂಚಿ ಸೇರಿದಂತೆ ಸಮಾಜದ ಹಿರಿಯರು, ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಂತರ ಸ್ಥಳಕ್ಕೆ ಆಗಮಿಸಿದ ತಶೀಲ್ದಾರರರಿಗೆ ಮನವಿ ಸಲ್ಲಿಸಲಾಯಿತು.