ಮುಸ್ಲಿಮರ ವಿರುದ್ಧ ಹುನ್ನಾರ ಬಿಡಿ: ಸಿಎಂ ಸಿದ್ದು
ಜೇವರಗಿ,ಮೇ.2: ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದುಳಿದವರ ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಮರಿಗೆ ಕೊಡುತ್ತಾರೆ ಎಂದು ಅಪಪ್ರಚಾರ ಮಾಡುವ ಮೂಲಕ ಮುಸ್ಲಿಮರ ವಿರುದ್ಧ ಹಿಂದುಳಿದವರನ್ನು ಎತ್ತಿಕಟ್ಟುವ ಹುನ್ನಾರವನ್ನು ಬಿಜೆಪಿಗರು ಮಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಜೇವರ್ಗಿಯಲ್ಲಿ ಬುಧವಾರ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ಸೋಲಿನ ಹತಾಶೆಯಿಂದ ಮೋದಿ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮಂಡಲ್ ಆಯೋಗದ ವರದಿ ಸೇರಿದಂತೆ ಒಟ್ಟಾರೆ ಮೀಸಲಾತಿ ವಿರೋಧಿಸಿದ್ದು ಇದೇ ಬಿಜೆಪಿಯವರು. ಜತೆಗೆ ದೇಶದಾದ್ಯಂತ ರಥಯಾತ್ರೆಯೂ ಮಾಡಿದ್ದು ಬಿಜೆಪಿಗರು. ಹಿಂದುಳಿದವರು ಮತ್ತು ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವರು ಬಿಜೆಪಿಯ ರಾಜ್ಯಸಭಾ ಸದಸ್ಯ ರಾಮಾ ಜೋಯಿಸ್. ಈ ಬಗ್ಗೆ ಸುಳ್ಳು ಹೇಳುವ ಮೋದಿಯವರ ಹೇಳಿಕೆಗಳು, ಪ್ರಧಾನಿಯ ಹುದ್ದೆಗೆ ಶೋಭೆ ತರುವಂಥದ್ದಲ್ಲ’ ಎಂದು ಹರಿಹಾಯ್ದರು.
‘ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‍ಸಿಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಗಳ (ಟಿಎಸ್‍ಪಿ) ಕಾಯ್ದೆಯನ್ನು ಜಾರಿಗೆ ತಂದು, ಎಸ್‍ಸಿ ಮತ್ತು ಎಸ್‍ಟಿ ಸಮುದಾಯಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಅನುದಾನ ತೆಗೆದಿರಿಸಿದ್ದು ಕಾಂಗ್ರೆಸ್ ಸರ್ಕಾರ. ಆದರೆ, ಬಿಜೆಪಿಗರು ಎಸ್‍ಸಿಪಿ ಮತ್ತು ಟಿಎಸ್‍ಪಿ ಅನುದಾನವನ್ನು ಅನ್ಯ ಯೋಜನೆಗಳಿಗೆ ಖರ್ಚು ಮಾಡಿದ್ದಾಗಿ ಸುಳ್ಳು ಜಾಹೀರಾತು ಕೊಟ್ಟಿದ್ದಾರೆ. ಕೇಂದ್ರದಲ್ಲಿ 10 ವರ್ಷ ಆಡಳಿತ ನಡೆಸಿದ್ದರೂ ಮೋದಿ ಅವರಿಗೆ ಎಸ್‍ಸಿಪಿ ಮತ್ತು ಟಿಎಸ್‍ಪಿ ಕಾಯ್ದೆ ತರಲು ಸಾಧ್ಯವಾಗಿಲ್ಲ. ಈಗ ದಲಿತರ ಬಗ್ಗೆ ಅಪಾರವಾದ ಪ್ರೀತಿ ಇದೆ ಎಂಬಂತ ಮಾತನಾಡುತ್ತಿದ್ದಾರೆ’ ಎಂದರು.
‘2014ರಲ್ಲಿ ದೇಶದ ಜನರಲ್ಲಿ ಹುಸಿ ಕನಸುಗಳನ್ನು ಬಿತ್ತಿ, ಭ್ರಮೆಗಳನ್ನು ಮೂಡಿಸಿ, ವಿದೇಶದಲ್ಲಿನ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗಳಿಗೆ ತಲಾ ?15 ಲಕ್ಷ ಹಾಕುತ್ತೇವೆ ಎಂದಿದ್ದರು. 2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದು, ಪುಲ್ವಾಮ ಘಟನೆ ಪ್ರಸ್ತಾಪದಂತಹ ವಿಚಾರಗಳನ್ನು ಚುನಾವಣೆಯ ಸರಕಾಗಿ ಮಾಡಿಕೊಂಡು ಎರಡು ಬಾರಿ ಪ್ರಧಾನಿಯಾದರು. ಜನರಿಗೆ ಈಗ ಮೋದಿಯ ನಿಜ ಬಣ್ಣ ಗೊತ್ತಾಗಿದ್ದು, ಅವರ ಹುಸಿ ಮಾತುಗಳಿಗೆ ಬೆಲೆ ಕೊಡುತ್ತಿಲ್ಲ’ ಎಂದು ಕುಟುಕಿದರು.
‘2024ರ ಚುನಾವಣೆಯಲ್ಲಿ ಜನರು ಮೋದಿಯ ಸುಳ್ಳು ಅರ್ಥ ಮಾಡಿ ಕೊಂಡಿದ್ದಾರೆ. ಸೋಲಿನ ಭಯದಿಂದಾಗಿ ಹತಾಶರಾದ ಮೋದಿ ಅವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಖರ್ಗೆ ಅವರನ್ನು ಬೈಯಲು ಶುರು ಮಾಡಿ, ಸುಳ್ಳುಗಳನ್ನೇ ಪ್ರಚಾರ ಮಾಡುತ್ತಿದ್ದಾರೆ’ ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಮಲ್ಲಾಬಾದ್ ಏತ ನೀರಾವರಿ ಯೋಜನೆಗೆ ?300 ಕೋಟಿ ತೆಗೆದಿರಿಸಿ, ಏನೆಲ್ಲ ವ್ಯವಸ್ಥೆ ಮಾಡಬೇಕು ಅದನ್ನು ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಟೆಂಡರ್ ಕರೆಯಲಾಗುವುದು. ಈ ಬಾರಿ ಮಲ್ಲಿಕಾರ್ಜುನ ಖರ್ಗೆ ಅವರ ಕೈಹಿಡಿದು ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬನ್ನಿ. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ 371 (ಜೆ) ತಂದಿದ್ದಾರೆ. ಹೀಗಾಗಿ, ಖರ್ಗೆ ಅವರ ಋಣ ತೀರಿಸಬೇಕಿದೆ’ ಎಂದು ಹೇಳಿದರು.’ದಿ. ಧರ್ಮಸಿಂಗ್ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಕಾಂಗ್ರೆಸ್ ಅಭ್ಯರ್ಥಿಗೆ 40 ಸಾವಿರ ಮತಗಳ ಲೀಡ್ ಕೊಡಿ’ ಎಂದು ಮತಯಾಚಿಸಿದರು.
ಸಭೆಯಲ್ಲಿ ಸಚಿವರಾದ ಶರಣಬಸಪ್ಪ ದರ್ಶನಾಪುರ, ಪ್ರಿಯಾಂಕ್ ಖರ್ಗೆ, ರಾಜ್ಯಸಭೆ ಮಾಜಿ ಸದಸ್ಯ ಎಲ್. ಹನಮಂತಯ್ಯ, ಕೆಕೆಆರ್‍ಡಿಬಿ ಅಧ್ಯಕ್ಷ ಡಾ. ಅಜಯ್‍ಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಅಶೋಕ ಮನಗೂಳಿ, ಲಕ್ಷ್ಮಣ ಸವದಿ, ಎಂ.ವೈ. ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ಬಾಬುರಾವ್ ಚಿಂಚನಸೂರ್, ಮಾಲೀಕಯ್ಯ ಗುತ್ತೇದಾರ್, ರೇವುನಾಯಕ ಬೆಳಮಗಿ, ಜಗದೇವ ಗುತ್ತೇದಾರ, ಸಿದ್ದಲಿಂಗರೆಡ್ಡಿ, ರುಕುಂ ಪಟೇಲ್ ಉಪಸ್ಥಿತರಿದ್ದರು.
ಕರ್ನಾಟಕ ತುಳಿಯುತ್ತಿರುವ ಮೋದಿ: ಖರ್ಗೆ
‘ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಮತ್ತು ಕಲಬುರಗಿಯಲ್ಲಿ ಯಾವುದೇ ಅಭಿವೃದ್ಧಿ ಆಗಬಾರದು ಎಂದು ತುಳಿದುಕೊಂಡು ಹೋಗುತ್ತಿದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪಾದಿಸಿದರು.
‘ಮೋದಿ ಅವರು ಸುಳ್ಳಿನ ಸರ್ದಾರ. ಇಂತಹವರಿಗೆ ಮತ ಹಾಕಿ ಮತವನ್ನು ಕೆಡಿಸಿಕೊಂಡರೆ ಪ್ರಜಾಪ್ರಭುತ್ವ ಹಾಳಾಗುತ್ತದೆ. ಸಂವಿಧಾನ ಉಳಿಯುವುದಿಲ್ಲ. ಕೆಲಸ ಮಾಡುವವರನ್ನು ನೋಡಿ ಮತಹಾಕಿ’ ಎಂದು ಕೋರಿದರು. ‘ವಿವೇಕ ಇಲ್ಲದವರು ಕಲಬುರಗಿಯಿಂದ ನೇರವಾಗಿ ರೈಲು ಓಡಿಸಲಿಲ್ಲ ಎನ್ನುತ್ತಿದ್ದಾರೆ. ಸೋಲಾಪುರ ವಿಭಾಗದಿಂದ ರೈಲು ಓಡಿಸಿದರೆ ಗಾಣಗಾಪುರಕ್ಕೂ ಸಂಪರ್ಕ ಸಿಗುತ್ತದೆ. ಕಲಬುರಗಿಯಲ್ಲಿ ನೀರು ಇಲ್ಲದ ಕಾರಣಕ್ಕೆ ಸೋಲಾಪುರದಿಂದ ಹಲವು ರೈಲುಗಳು ಬಿಡಬೇಕಾಯಿತು’ ಎಂದರು.
‘ಭಾಗ್ಯದ ಲಕ್ಷ್ಮಿ’ ಹಾಡು ಹಾಡಿದ ಡಿಕೆಶಿ
ಡಿ.ಕೆ ಶಿವಕುಮಾರ ಅವರು ತಮ್ಮ ಭಾಷಣ ನಡುವೆ ದೇಶದ ಬಡ ಮಹಿಳೆಯರಿಗೆ ವಾರ್ಷಿಕವಾಗಿ ತಲಾ ರೂ.1 ಲಕ್ಷ ನೀಡುವ ಯೋಜನೆ ಪ್ರಸ್ತಾಪಿಸಿ, ‘ಭಾಗ್ಯದ ಲಕ್ಷ್ಮೀ ಬಾರಮ್ಮ…’ ಗೀತೆ ಹಾಡಿದರು. ನೆರೆದಿದ್ದವರೂ ಜೋರಾಗಿ ಕೂಗಿದರು.
ಸಭೆಯಲ್ಲಿ ನೆರೆದ ಒಬ್ಬೊಬ್ಬರು ನಾಲ್ಕು ವೋಟ್ ಹಾಕಿಸಿ, 40 ಸಾವಿರ ಲೀಡ್ ಕೊಟ್ಟರೆ ಜೇವರ್ಗಿಗೆ ಬಂದು ಅಭಿನಂದನೆ ಸಲ್ಲಿಸುತ್ತೇವೆ’ ಎಂದರು.
ಡಿಕೆಶಿ ಮಾಜಿ ಸಿಎಂ!
ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ತಮ್ಮ ಭಾಷಣದ ಆರಂಭದಲ್ಲಿ ವೇದಿಕೆಯ ಮೇಲಿದ್ದವರ ಹೆಸರುಗಳ ಪ್ರಸ್ತಾಪದ ವೇಳೆ ‘ಮಾಜಿ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್’ ಎಂದು ಹೇಳಿದರು.