ಪ್ರಜ್ವಲ್ ರೇವಣ್ಣ ಘಟನೆಯಲ್ಲಿ ಮೋದಿ ವಿಜಯೇಂದ್ರ ಕ್ಷಮೆ ಕೇಳಲಿ : ಪುಷ್ಪಾ ಅಮರನಾಥ
ಬೀದರ್:ಮೇ.2: ಪ್ರಜ್ವಲ್ ರೇವಣ್ಣ ಇದ್ದಾರೆನ್ನಲಾದ ಅಶ್ಲೀಲ ವಿಡಿಯೋ ಇಡೀ ದೇಶದ ನಾಗರಿಕ ಸಮಾಜ ತಲೆ ತಗ್ಗಿಸುವ ವಿಷಯವಾಗಿದೆ. ಆರೋಪಿ ವಿದೇಶಕ್ಕೆ ಪರಾರಿಯಾಗಲು ಕಾರಣ ಯಾರು? ಎಂಬ ತನಿಖೆಯಾಗಬೇಕು. ಹೆಣ್ಣು ಮಕ್ಕಳ ಜೊತೆ ಅನಾಗರಿಕತೆಯಿಂದ ನಡೆದುಕೊಂಡಿರುವ ಆರೋಪಿಗೆ ಕಠಿಣಾತಿ ಕಠಿಣ ಶಿಕ್ಷೆಯಾಗಬೇಕೆಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೇಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೇಸ್ ಸಮಿತಿ ವತಿಯಿಂದ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಜ್ವಲ್ ರೇವಣ್ಣ ವಿಷಯದಲ್ಲಿ ಇಂದಿಗೂ ಮಾತನಾಡಿಲ್ಲ. ಮೋದಿ ಪರಿವಾರದಲ್ಲಿ ಅತ್ಯಾಚಾರಿಗಳು, ಕೊಲೆಗಡುಕರಿದ್ದಾರೆ. ಎನ್‍ಡಿಎ ಸರ್ಕಾರ ಆರೋಪಿಗಳನ್ನು ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು.
ನೇಹಾ ಹಿರೇಮಠ ವಿಷಯದಲ್ಲಿ ಬಿಜೆಪಿಗರು ಹೋರಾಟ ಮಾಡಿದ್ದರು. ಆದರೆ ಪ್ರಜ್ವಲ್ ರೇವಣ್ಣ ವಿಷಯದಲ್ಲಿ ಏಕೆ ಮಾತನಾಡುತ್ತಿಲ್ಲ? ಒಂದು ಕಡೆ ನಮ್ಮ ಸರ್ಕಾರ ಮಹಿಳಾ ಪರ ಎಂದು ‘ಬೇಟಿ ಬಚಾವೋ ಬೇಟಿ ಪಡಾವೋ,’ ‘ನಾರಿ ಸಮ್ಮಾನ್’ ಎಂದೆಲ್ಲಾ ಯೋಜನೆ ಜಾರಿಗೆ ತರುತ್ತಾರೆ. ಇನ್ನೊಂದು ಕಡೆ ಮಹಿಳೆಯರ ಮಾಂಗಲ್ಯ ಕಸಿಯುತಿದ್ದಾರೆ. ಪ್ರಜ್ವಲ್ ರೇವಣ್ಣ ಉಮೇಶರೆಡ್ಡಿಗಿಂತ ವಿಕೃತಕಾಮಿ. ಇಂತಹ ವಿಕೃತ ಮನಸ್ಥಿತಿ ಹೊಂದಿರುವವರಿಗೆ ಕಠಿಣ ಶಿಕ್ಷೆಯಾಗಬೇಕು. ಈ ಕುರಿತು ರಾಜ್ಯದಾದ್ಯಂತ ಕಾಂಗ್ರೇಸ್ ಮಹಿಳಾ ಘಟಕದ ವತಿಯಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ನೈತಿಕ ಹೊಣೆ ಹೊತ್ತು ನರೇಂದ್ರ ಮೋದಿ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ಆಗ್ರಹಿಸಿದರು.
ಕಾಂಗ್ರೇಸ್ ಮಹಿಳಾ ಘಟಕದ ಮಾಜಿ ರಾಜ್ಯಾಧ್ಯಕ್ಷೆ ಮಂಜುಳಾ ನಾಯ್ಡು ಮಾತನಾಡಿ, ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೇಸ್ ಸರ್ಕಾರ ಮಹಿಳೆಯರಿಗೆ ಶಕ್ತಿ ತುಂಬುವ ಕಾರ್ಯ ಮಾಡುತ್ತಿದೆ. ಮಹಿಳೆಯರಿಗೆ ಗೌರವಿಸುತ್ತಿದೆ. ಆದರೆ ಮಹಿಳೆಯರಿಗೆ ಗೌರವಿಸುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರೇ ಎಲ್ಲಿದ್ದಿರಾ? ಘಟನೆಯನ್ನು ಖಂಡಿಸಿ ಎಂದು ಹೇಳಿದರಲ್ಲದೆ ಕರ್ನಾಟಕವೂ ಭಾರತದ ಒಳಗಡೆಯೇ ಇದೆ. ನಾರಿಶಕ್ತಿ ಮೇಲೆ ಅತ್ಯಾಚಾರ ಶೋಷಣೆಯಾಗುತ್ತಿದೆ. ದಯವಿಟ್ಟು ಖಂಡಿಸಿ ಎಂದು ತಿಳಿಸಿದರು. ಅಲ್ಲದೇ ನೊಂದ ಮಹಿಳೆಯರಿಗೆ ನಾವು ಧೈರ್ಯ ತುಂಬುತ್ತೇವೆ. ಮುಂದೆಯೂ ಮಹಿಳೆಯರಿಗೆ ಅನ್ಯಾಯವಾಗಬಾರದು. ರಕ್ಷಣೆ ಕೊಡಲು ನಾವು ತಯಾರಾಗಿದ್ದೇವೆ. ಎಲ್ಲರೂ ಸೇರಿ ಮಹಿಳೆಯರಿಗೆ ನ್ಯಾಯ ಕೊಡಿಸೋಣ ಎಂದರು.
ಇದೇ ವೇಳೆ ಮಹಿಳಾ ಕಾಂಗ್ರೇಸ್ ಘಟಕದ ಜಿಲ್ಲಾಧ್ಯಕ್ಷೆ ಪೂಜಾ ಜಾರ್ಜ್, ಸ್ಯಾಮುಯೆಲ್, ಪ್ರಧಾನ ಕಾರ್ಯದರ್ಶಿ ಅಕ್ಕಮಹಾದೇವಿ, ಎ.ಐ.ಸಿ.ಸಿ ಸದಸ್ಯೆ ಡಾ. ಗುರಮ್ಮಾ ಸಿದ್ದಾರೆಡ್ಡಿ, ಮಾಜಿ ಜಿ.ಪಂ ಅಧ್ಯಕ್ಷೆ ರಾಜಶ್ರೀ ಶ್ರೀಕಾಂತ ಸ್ವಾಮಿ, ಪ್ರಮುಖರಾದ ವನೀಲಾ ಸೂರ್ಯವಂಶಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.