ಕಾರ್ಮಿಕರ ಹಕ್ಕುಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ.
ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಮೇ.02: ದೇಶದ ಎಲ್ಲಾ ಕಾರ್ಮಿಕರಿಗೂ ಕಾರ್ಮಿಕ ಹಕ್ಕು ಸಿಗಬೇಕೆಂದು ಮೊದಲು ಹೋರಾಟ ಮಾಡಿದ್ದೇ ಎಐಟಿಯುಸಿ ಕಾರ್ಮಿಕ ಸಂಘಟನೆ ಎಂದು ಎಐಕೆಎಸ್ ರಾಜ್ಯ ಕಾರ್ಯದರ್ಶಿ ಜನಾರ್ಧನ್ ತಿಳಿಸಿದರು.
ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿಯಿರುವ ಸರ್ಕಾರಿ ನೌಕರರ ಭವನದಲ್ಲಿ ಎಐಟಿಯುಸಿ ಸಂಘಟನೆ ನೇತೃತ್ವದಲ್ಲಿ ಬುಧವಾರ ನಡೆದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿವಿಧ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರು ದಿನಕ್ಕೆ 8 ತಾಸು ಕೆಲಸ ಮಾಡಬೇಕು, ಕನಿಷ್ಟ ವೇತನ, ವಿಮಾ ಪರಿಹಾರ ಸೇರಿದಂತೆ ಪ್ರತ್ಯೇಕ ಕಾರ್ಮಿಕ ಕಾಯ್ದೆ ಜಾರಿ ಮಾಡಬೇಕೆಂದು ನಿರಂತರ ಹೋರಾಟದ ಫಲವಾಗಿ ಇಂದು ಕಾರ್ಮಿಕರು 8 ತಾಸು ಕೆಲಸ ಮಾಡುತ್ತಿದ್ದಾರೆ ಎಂದರು.
ಎಐಟಿಯುಸಿ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ ಈ ದೇಶ ಕಟ್ಟಿದ್ದು ಶ್ರೀಮಂತರಲ್ಲ ಕಾರ್ಮಿಕರು ಪ್ರತಿಯೊಂದು ಪ್ರಗತಿಯ ಹಿಂದೆ ಕಾರ್ಮಿಕರ ಶ್ರಮ ಇದೆ ಎಂದು ಹೇಳಿದರು.
ಪ್ರತಿಯೊಬ್ಬ ಕಾರ್ಮೀಕರು ಮೇ.7ರಂದು ತಪ್ಪದೇ ಮತದಾನ ಮಾಡಿ ದೇಶದ ಪ್ರಜಾಪ್ರಭುತ್ವದ ಗೌರವವನ್ನು ಕಾಪಾಡಬೇಕು ಎಂದರು.
ಸಾರಿಗೆ ಕಾರ್ಮಿಕ ಮುಖಂಡ ಜೆ.ಕೊಟ್ರೇಶ್, ಸ್ಲಂಬೋರ್ಡ್ ಯೋಜನೆಯ ವ್ಯವಸ್ಥಾಪಕ ತರುಣ್ ಇಕ್ಬಾಲ್‍ಸಿಂಗ್, ಎಐಎಸ್‍ಎಫ್ ಮುಖಂಡ ಹರ್ಷ ಮಾತನಾಡಿದರು.
ಹೆಚ್.ಎಂ.ಸಂತೋಷ್, ರಮೇಶನಾಯ್ಕ, ಹಲಗಿ ಸುರೇಶ್, ಟಿ.ಬಸಮ್ಮ, ರೂಪ, ಹಗರಿಗುಡಿಹಳ್ಳಿ ಶಿವರಾಮ್, ಕೋಟ್ಯಪ್ಪ, ರಂಗಪ್ಪ, ಸುಮಂಗಲತಾಯಿ, ಬಳಿಗನೂರು ಕೊಟ್ರೇಶ್, ಬಾಷಾಸಾಬ್, ಅರುಣ, ದೊಡ್ಡಬಸವರಾಜ, ದಾದಪೀರ್, ಮಾರುತಿ ಸೇರಿದಂತೆ ಮತ್ತಿತರರು ಇದ್ದರು.