ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಶಿಕ್ಷಕರು ಪ್ರೇರಣೆಯಾಗಲಿ
ಕೋಲಾರ,ಸೆ,೨೨- ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಶಿಕ್ಷಕರು ಪ್ರೇರಣೆಯಾಗಬೇಕು, ಅವರಲ್ಲಿನ ಸಾಮರ್ಥ್ಯ ಗುರುತಿಸಿ ಅವರನ್ನು ಪ್ರೋತ್ಸಾಹಿಸಬೇಕು ಎಂದು ಮುದುವತ್ತಿ ಗ್ರಾ.ಪಂ ಅಧ್ಯಕ್ಷೆ ರತ್ನಮ್ಮ ಹನಮಪ್ಪ ಕರೆ ನೀಡಿದರು.
ಪಾರ್ಶ್ವಗಾನಹಳ್ಳಿ ಸರಸ್ವತಿ ವಿದ್ಯಾಮಂದಿರದ ಆವರಣದಲ್ಲಿ ನಡೆದ ಮುದುವತ್ತಿ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಪಠ್ಯದ ಜತೆಗೆ ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆಗಳೂ ಸಹಾ ಸಮಗ್ರ ಶಿಕ್ಷಣದ ಭಾಗವಾಗಿದ್ದು, ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವುದು ಎಷ್ಟು ಮುಖ್ಯವೋ ಅವರ ಬದುಕಿಗೆ ಮೌಲ್ಯ ಶಿಕ್ಷಣ ನೀಡುವುದು ಶಿಕ್ಷಕರ ಪ್ರಮುಖ ಜವಾಬ್ದಾರಿ ಎಂದು ತಿಳಿಸಿದರು.
ಇಸಿಒ ಕೆ.ಶ್ರೀನಿವಾಸ್ ಮಾತನಾಡಿ, ಇಂದು ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ಕಂಡಾಗ ಶಿಕ್ಷಣಕ್ಕಿಂತ ಮೌಲ್ಯಗಳನ್ನು ಕಲಿಸುವುದು ಅತಿ ಮುಖ್ಯವೆನಿಸುತ್ತಿದೆ, ಮಕ್ಕಳನ್ನು ದುಶ್ಚಟಗಳಿಂದ ದೂರವಿರುವಂತೆ ಮಾಡುವ ಮನಸ್ಥಿತಿ ಬೆಳೆಸಬೇಕು, ಅವರು ಸಮಾಜಕ್ಕೆ ಹೊರೆಯಾಗಬಾರದು ದೇಶದ ಆಸ್ತಿಯಾಗಬೇಕು ಎಂದರು.
ಸಿಆರ್‌ಪಿ ಎಸ್.ಎಂ.ಈರೇಗೌಡ ಸ್ವಾಗತಿಸಿ, ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅರಳಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದ್ದು, ಮಕ್ಕಳು ಕೂಡ ಉತ್ಸಾಹದಿಂದ ಪಾಲ್ಗೊಳ್ಳಬೇಕು ಬಹುಮಾನ ಸಿಗಲಿಲ್ಲ ಎಂಬ ಬೇಸರ ಬೇಡ, ಸ್ಪರ್ಧಿಸುವುದು ಮುಖ್ಯ ಎಂಬುದನ್ನು ಅರಿಯಬೇಕು ಎಂದರು.
ಬಿಆರ್‌ಪಿ ರಶ್ಮಿ ಮಾತನಾಡಿ, ಕೆಲವು ಮಕ್ಕಳಲ್ಲಿ ಪಠ್ಯ ಕಲಿಕೆಗೆ ಆಸಕ್ತಿ ಹೊಂದಿದ್ದರೆ ಕೆಲವು ಮಕ್ಕಳಲ್ಲಿ ಕ್ರೀಡೆಗೆ, ಸಾಂಸ್ಕೃತಿಕ ಕಲೆಗಳನ್ನು ಕಲಿಯುವ ಆಸಕ್ತಿ ಸಹಜವಾಗಿಯೇ ಇದ್ದು, ಅವರ ಆಶಯ, ಆಸಕ್ತಿಗೆ ತಕ್ಕಂತೆ ಅವರಿಗೆ ಪ್ರೋತ್ಸಾಹ ನೀಡುವುದು ಶಿಕ್ಷಕರು ಮತ್ತು ಪೋಷಕರ ಕರ್ತವ್ಯವಾಗಿದ್ದು, ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳಂತೆ ಪರಿಗಣಿಸಬಾರದು ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಟಿ.ನಾರಯಣಸ್ವಾಮಿ,ಮುನಿಯಪ್ಪ, ಮುನಿರತ್ನಮ್ಮ, ದಾನಿಗಳಾದ ಧರ್ಮಶ್, ಎಂ.ಆರ್.ವೆಂಕಟೇಶ್, ಮುನಿಕೃಷ್ಣಪ್ಪ, ತಾನಪ್ಪ, ಅಂಬರೀಶ್, ಮಂಜುನಾಥ್‌ರನ್ನು ಸನ್ಮಾನಿಸಲಾಯಿತು. ದಾನಿ ಶಿಕ್ಷಕ ಧರ್ಮೇಶ್ ಮುದುವತ್ತಿ ಕ್ಲಸ್ಟರ್‌ನ ಎಲ್ಲಾ ಅಡುಗೆ ಸಿಬ್ಬಂದಿಗೆ ಬಾಗೀನಾ ಕೊಟ್ಟು ಶುಭ ಕೋರಿದರು.
ಸಿಆರ್‌ಪಿ ಮೀನಾ, ಮಂಜುನಾಥ್, ಹೇಮಂತ್ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ನಾರಾಯಣಸ್ವಾಮಿ ಕಾರ್ಯದರ್ಶಿ ಚಂದ್ರಪ್ಪ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕರಾದ ವನಿತಾಕುಮಾರಿ, ಶಿವಶಂಕರ್, ಜಯಲಲಿತ, ವರಲಕ್ಷ್ಮಿ, ಕವಿತಾ, ಸರಸ್ವತಿ, ಅನಿತಾಕುಮಾರಿ, ಸುಜಾತಾ, ಸ್ವರ್ಣಲತಾ, ಮಂಜುನಾಥಗೌಡ, ಪದ್ಮಾವತಿ, ಶೋಭಾ, ನಾರಾಯಣಸ್ವಾಮಿ, ಶ್ರೀನಿವಾಸ, ಸುನಿತಾಕುಮಾರಿ, ಪ್ರಮೀಳಮ್ಮ, ಸುಶೀಲಮ್ಮ, ವಿಜಯಲಕ್ಷ್ಮಿ ಮಂಜುಳಾ, ಭಾಗ್ಯಲಕ್ಷ್ಮಿ, ಸಿಆರ್‌ಪಿ ಪ್ರೀತಿ ಮತ್ತಿತರರಿದ್ದರು.