ಸ್ಕೌಟ್ಸ್ ಗೈಡ್ಸ್‌ಗಳು ಸೇವೆಗೆ ಸದಾ ಸಿದ್ದರಾಗಿರಬೇಕು
ಕೋಲಾರ.ಸೆ.೨೨- ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಉತ್ತಮ ಆದರ್ಶಗಳನ್ನು ಶಾಲಾ ಮಕ್ಕಳಲ್ಲಿ ಬೆಳೆಸಲು ಶಿಬಿರಗಳನ್ನು ಕೈಗೊಂಡು ತರಬೇತಿ ನೀಡುತ್ತಾ ಬಂದಿದೆ. ಎಲ್ಲಾ ವಿದ್ಯಾರ್ಥಿಗಳು ಸ್ಕೌಟ್ಸ್ ಗೈಡ್ಸ್ ಶಿಬಿರದಲ್ಲಿನ ಜೀವನ ಶೈಲಿಯನ್ನು ಮೈಗೂಡಿಸಿಕೊಂಡು ನಮ್ಮ ಸಮೀಪದ ಅಗತ್ಯ ಜನರಿಗೆ ಅಥವಾ ಪರಿಸರಕ್ಕೆ ಸೇವೆ ಸಲ್ಲಿಸುವ ಮೂಲಕ ಸಮಾಜಕ್ಕೆ ನೆರವಾಗಬೇಕು ಎಂದು ಜಿಲ್ಲಾ ಸ್ಕೌಟ್ ಆಯುಕ್ತರಾದ ಕೆ.ಆರ್.ಸುರೇಶ್ ತಿಳಿಸಿದರು.
ನಗರದ ಕುವೆಂಪು ಪಾರ್ಕನಲ್ಲಿ ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಮತ್ತು ರೋಟರಿ ಕೋಲಾರ ನಂದಿನಿ ವತಿಯಿಂದ ಆಯೋಜನೆ ಮಾಡಿದ್ದ ಅಂತರ್ ರಾಷ್ಟ್ರೀಯ ಶಾಂತಿ ದಿನಾಚರಣೆಗೆ ಚಾಲನೆ ನೀಡಿ ಮಾತನಾಡುತ್ತಾ ನಮ್ಮ ಸಂಸ್ಥೆಯ ಮೂಲ ಆಶಯ ವಿದ್ಯಾರ್ಥಿಗಳನ್ನು ಉತ್ತಮ ನಾಗರೀಕರನ್ನಾಗಿ ತಯಾರು ಮಾಡಲು ಬೇಕಾದ ತರಬೇತಿಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಶಿಬಿರಗಳಲ್ಲಿ ಭಾಗವಹಿಸಿಸುವುದರಿಂದ ಧೈರ್ಯ, ಉತ್ತಮ ವಾಕ್ ಕೌಶಲ್ಯ, ನಾಯಕತ್ವ, ಜೀವನ ಕೌಶಲ್ಯಗಳನ್ನು ಕಲಿಯಬಹುದಾಗಿದೆ ಎಂದರು.
ಜಿಲ್ಲಾ ಸಹಕಾರ್ಯದರ್ಶಿ ಸ್ಕೌಟ್ ಬಾಬು ಮಾತನಾಡಿ ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಯುವಪೀಳಿಗೆಯನ್ನು ವಿಶ್ವ ಶಾಂತಿದೂತರನ್ನಾಗಿ ತಯಾರು ಮಾಡುತ್ತಾ, ನಮ್ಮ ಸುತ್ತಲಿನ ಜಗತ್ತಿಗೆ ಕೈಲಾದಷ್ಟು ಮಟ್ಟಿಗೆ ಸಹಾಯಮಾಡುವುದೇ ಮೂಲ ಉದ್ದೇಶವಾಗಿದೆ. ಯುವ ಪೀಳಿಗೆ ಇಂದು ಮೋಬೈಲ್ ಮತ್ತು ಟಿ.ವಿಗಳನ್ನು ನೋಡುತ್ತಾ ನಮ್ಮ ಸುತ್ತಲಿನ ಪರಿಸರವನ್ನು ಬೆಳೆಸಲು ಕೈಜೋಡಿಸದಿರುವುದು ಮುಂದಿನ ಪೀಳಿಗೆಗೆ ದೊಡ್ಡ ಸವಾಲುಗಳನ್ನು ಎದುರಿಸ ಬೇಕಾಗಲಿದೆ. ಪ್ರತಿಯೊಬ್ಬರೂ ಶಾಂತಿ- ಸಹಬಾಳ್ವೆಯಿಂದ ಬದುಕಬೇಕು, ಹಾಗೂ ಸುಸ್ಥಿರ ಸಮಾಜದ ಅಭಿವೃದ್ದಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳನ್ನು ಈ ಮೂಲಕ ಬದಲಾವಣೆಗೆ ತರುತ್ತಾ ಸೇವಾ ಗುಣಗಳನ್ನು ಬೆಳೆಸಬೇಕು ಎಂದರು.
ಸುಭಾಷ್ ಶಾಲೆಯ ಸ್ಕೌಟ್ ಮಾಸ್ಟರ್ ಚೇತನ್ ಮಾತನಾಡಿ ನಾವು ನಮ್ಮ ಮನೆಗಳಲ್ಲಿ ಮಾಡುವ ಸಣ್ಣ ಸಹಾಯ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಉಪಕಾರ ಸಮಾಜಕ್ಕೆ ಆಗಲಿದೆ, ಸ್ಕೌಟ್ಸ್ ಗೈಡ್ಸ್ ಗಳು ಪ್ರತಿವರ್ಷ ಒಂದು ಗಿಡವನ್ನು ನೆಟ್ಟು ಪೋಷಿಸುವುದು, ಮನೆಯ ಮುಂದಿನ ಬೀದಿ ದೀಪವನ್ನು ಬೆಳಿಗ್ಗೆ ಆಫ್ ಮಾಡುವುದು, ಮನೆಯಲ್ಲಿ ಉಳಿದ ಆಹಾರವನ್ನು ಪ್ರಾಣಿ ಪಕ್ಷಿಗಳಿಗೆ ನೀಡುವುದು, ಮನೆಯ ಮಾಳಿಗೆಗಳಲ್ಲಿ ಪಕ್ಷಿಗಳಿಗೆ ಕುಡಿಯಲು ನೀರು ವ್ಯವಸ್ಥೆ ಮಾಡುವುದು ಈ ತರಹದ ಹತ್ತು ಹಲವು ಸೇವಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸಮಾಜಕ್ಕೆ ನೆರವಾಗಬೇಕು ಎಂದು ತಿಳಿಸಿದರು.
ಈ ದಿನದ ವಿಶೇಷವಾಗಿ ಪಾರ್ಕನಲ್ಲಿದ್ದ ಎಲ್ಲಾ ರೀತಿಯ ಪ್ಲಾಸ್ಟಿಕ್‌ಕಸವನ್ನು ಸಂಗ್ರಹಿಸಿ ಪಾರ್ಕ ಅನ್ನು ಸ್ವಚ್ಚಮಾಡಲಾಯಿತು.